ರಕ್ಷಣಾ ಸಚಿವಾಲಯದಿಂದ 'ಆಪರೇಶನ್ ಸಿಂಧೂರ' ಪ್ರಬಂಧ ಸ್ಪರ್ಧೆ
ಹೊಸದಿಲ್ಲಿ: ‘ಆಪರೇಶನ್ ಸಿಂಧೂರ’ ವಿಷಯದ ಕುರಿತ ಪ್ರಬಂಧ ಸ್ಪರ್ಧೆಯನ್ನು ರಕ್ಷಣಾ ಸಚಿವಾಲಯವು ಆಯೋಜಿಸಿದ್ದು, ಅದು ಜೂನ್ 1ರಿಂದ 30ರವರೆಗೆ ನಡೆಯಲಿದೆ.
ಈ ಪ್ರಬಂಧ ಸ್ಪರ್ಧೆಯಲ್ಲಿ ಮೂವರು ಟಾಪ್ ವಿಜೇತರಿಗೆ ತಲಾ 10 ಸಾವಿರ ಬಹುಮಾನವನ್ನು ನೀಡಲಾಗುವುದು ಹಾಗೂ ಅವರಿಗೆ ದಿಲ್ಲಿಯ ಕೆಂಪುಕೋಟೆಯಲ್ಲಿರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿಶೇಷ ಅವಕಾಶ ದೊರೆಯಲಿದೆ.
26 ಜನರನ್ನು ಬಲಿತೆಗೆದುಕೊಂಡ ಎಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು, ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ 9 ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಲು ಮೇ 7ರಂದು ‘ಆಪರೇಶನ್ ಸಿಂಧೂರ್ ’ ಕಾರ್ಯಾಚರಣೆಯನ್ನು ಆರಂಭಿಸಿತ್ತು.
ಇದರ ಬಳಿಕ ಪಾಕಿಸ್ತಾನ ನಡೆಸಿದ ದಾಳಿ ಯತ್ನಗಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ವಿವಿಧ ಸೇನಾ ನೆಲೆಗಳ ಮೇಲೆ ವಾಯುದಾಳಿ ನಡೆಸಿತ್ತು.
ಭಾರತವು ಭಯೋತ್ಪಾದನೆ ವಿರುದ್ಧ ಹೊಸ ಕೆಂಪು ಗೆರೆಯನ್ನು ಎಳೆದಿದೆ ಹಾಗೂ ಆಪರೇಶನ್ ಸಿಂಧೂರ ಕಾರ್ಯಾಚರಣೆಯು ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಉಗ್ರವಾದದ ವಿರುದ್ಧ ಭಾರತದ ಪ್ರತಿಕ್ರಿಯೆಗೆ ಹೊಸ ಮಾದರಿಯೊಂದನ್ನು ರೂಪಿಸಿದೆ ಎಂದು ನರೇಂದ್ರ ಮೋದಿ ಸರಕಾರವು ಒತ್ತಿ ಹೇಳಿದೆ.
ಸ್ಪರ್ಧೆಯ ದಿನಾಂಕಗಳು ಜೂನ್ 1ರಿಂದ 30ರವರೆಗಿರುವುದು. ಓರ್ವ ವ್ಯಕ್ತಿಗೆ ಒಂದೇ ಪ್ರವೇಶಾವಕಾಶವಿರುವುದು. ಹಿಂದಿ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಪ್ರಬಂಧವನ್ನು ಬರೆಯಬಹುದು.ಅಲ್ಲದೆ ಸಚಿವಾಲಯವು ಸ್ಪರ್ಧೆಯ ಕುರಿತ ವಿವರಗಳನ್ನು ಒಳಗೊಂಡ ಪೋಸ್ಟರ್ ಹಾಗೂ ಆಪರೇಶನ್ ಸಿಂಧೂರದ ಲೋಗೊವನ್ನು ಕೂಡಾ ‘ಎಕ್ಸ್’ನಲ್ಲಿ ಹಂಚಿಕೊಳ್ಳಲಾಗಿದೆ.