×
Ad

79,000 ಕೋಟಿ ರೂ.ಗಳ ಮಿಲಿಟರಿ ಉಪಕರಣಗಳ ಖರೀದಿಗೆ ರಕ್ಷಣಾ ಸಚಿವಾಲಯದ ಅನುಮೋದನೆ

Update: 2025-10-23 22:33 IST

ರಾಜನಾಥ್ ಸಿಂಗ್ | Photo Credit : PTI

ಹೊಸದಿಲ್ಲಿ: ಗುರುವಾರ ಇಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ರಕ್ಷಣಾ ಖರೀದಿ ಮಂಡಳಿಯು(ಡಿಎಸಿ) ಸೇನೆ,ನೌಕಾಪಡೆ ಮತ್ತು ವಾಯುಪಡೆಗಾಗಿ ಒಟ್ಟು 79,000 ಕೋಟಿ ರೂ.ಗಳ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳ ಖರೀದಿ ಪ್ರಸ್ತಾವಗಳಿಗೆ ಹಸಿರು ನಿಶಾನೆಯನ್ನು ತೋರಿಸಿದೆ.

ಸೇನೆಗಾಗಿ ನಾಗ್ ಕ್ಷಿಪಣಿ ವ್ಯವಸ್ಥೆ(ಟ್ರ್ಯಾಕ್ಡ್) Mk-II(NAMIS),ನೆಲ ಆಧಾರಿತ ಮೊಬೈಲ್ ELINT ಸಿಸ್ಟಮ್(GBMES) ಮತ್ತು ಸರಕುಗಳನ್ನು ನಿರ್ವಹಿಸುವ ಕ್ರೇನ್ ಜೊತೆಗೆ ಹೆಚ್ಚಿನ ಚಲನಶೀಲತೆಯ ವಾಹನಗಳ(ಎಚ್‌ಎಂವಿಗಳು) ಖರೀದಿ ಪ್ರಸ್ತಾವಕ್ಕೆ ಅನುಮೋದನೆಯನ್ನು ನೀಡಲಾಗಿದೆ.

ರಕ್ಷಣಾ ಸಚಿವಾಲಯದ ಪ್ರಕಾರ NAMIS ಖರೀದಿಯು ಶತ್ರುವಿನ ಯುದ್ಧ ವಾಹನಗಳು, ಬಂಕರ್‌ಗಳು ಮತ್ತು ಯುದ್ಧಕ್ಷೇತ್ರದಲ್ಲಿಯ ಇತರ ಭದ್ರಕೋಟೆಗಳನ್ನು ನಾಶಗೊಳಿಸುವ ಭಾರತೀಯ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಇದೇ ವೇಳೆ GBMES ಶತ್ರುಗಳ ಚಲನವಲನಗಳ ಕುರಿತು ದಿನದ 24 ಗಂಟೆಗಳ ಕಾಲವೂ ವಿದ್ಯುನ್ಮಾನ ಬೇಹು ಮಾಹಿತಿಯನ್ನು ಒದಗಿಸುತ್ತದೆ. ಎಚ್‌ಎಂವಿಗಳು ವಿವಿಧ ಭೂಪ್ರದೇಶಗಳಲ್ಲಿ ಪಡೆಗಳಿಗೆ ಲಾಜಿಸ್ಟಿಕ್ ಬೆಂಬಲವನ್ನು ಗಣನೀಯವಾಗಿ ಹೆಚ್ಚಿಸಲಿವೆ.

ನೌಕಾಪಡೆಗಾಗಿ ವಿಮಾನವಾಹಕ ನೌಕೆಗಳಲ್ಲಿ ವಿಮಾನಗಳು ಇಳಿಯಲು ವೇದಿಕೆಗಳು,30 ಎಂಎಂ ನೇವಲ್ ಸರ್ಫೇಸ್ ಗನ್‌ಗಳು,ಆಧುನಿಕ ಹಗುರ ಟಾರ್ಪೆಡೋಗಳು ಇತ್ಯಾದಿಗಳು,ವಾಯುಪಡೆಗಾಗಿ ಸಿಎಲ್‌ಆರ್‌ಟಿಎಸ್/ಡಿಎಸ್(ಕೊಲಾಬರೇಟಿವ್ ಲಾಂಗ್ ರೇಂಜ್ ಸಾಚ್ಯುರೇಷನ್/ಡಿಸ್ಟ್ರಕ್ಷನ್ ಸಿಸ್ಟಮ್) ಮತ್ತು ಇತರ ಯೋಜನೆಗಳಿಗಾಗಿ ಅನುಮತಿ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News