×
Ad

ತರಗತಿ ಕೊಠಡಿ ನಿರ್ಮಾಣ ಹಗರಣ : ಸಿಸೋಡಿಯಾ, ಜೈನ್‌ ಗೆ ಮತ್ತೆ ಸಂಕಷ್ಟ,ದಿಲ್ಲಿ ಎಸಿಬಿಯಿಂದ ಸಮನ್ಸ್

Update: 2025-06-04 20:36 IST

PC : PTI 

ಹೊಸದಿಲ್ಲಿ: ಸರಕಾರಿ ಶಾಲೆಗಳಲ್ಲಿ ತರಗತಿ ಕೊಠಡಿಗಳ ನಿರ್ಮಾಣದಲ್ಲಿ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ದಿಲ್ಲಿ ಸರಕಾರದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವು ಆಪ್ ನಾಯಕರಾದ ಮನೀಷ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ ಎಂದು ಅಧಿಕಾರಿಯೋರ್ವರು ಬುಧವಾರ ಇಲ್ಲಿ ತಿಳಿಸಿದರು.

ಜೂ.6ರಂದು ಎಸಿಬಿ ಮುಂದೆ ಹಾಜರಾಗುವಂತೆ ಜೈನ್ ಅವರಿಗೆ ಸೂಚಿಸಲಾಗಿದ್ದು, ಸಿಸೋಡಿಯಾ ಜೂ.9ರಂದು ವಿಚಾರಣೆಗೆ ಹಾಜರಾಗಬೇಕಿದೆ.

ದಿಲ್ಲಿ ಸರಕಾರಿ ಶಾಲೆಗಳಲ್ಲಿ 12,000ಕ್ಕೂ ಅಧಿಕ ತರಗತಿ ಕೊಠಡಿಗಳು ಮತ್ತು ತಾತ್ಕಾಲಿಕ ರಚನೆಗಳ ನಿರ್ಮಾಣದಲ್ಲಿ 2,000 ಕೋ.ರೂ.ಗಳ ಹಣಕಾಸು ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಆಧಾರದಲ್ಲಿ ಎಸಿಬಿ ಎ.30ರಂದು ಎಫ್‌ಐಆರ್ ದಾಖಲಿಸಿಕೊಂಡಿತ್ತು.

ದಿಲ್ಲಿಯ ಹಿಂದಿನ ಆಪ್ ಸರಕಾರದಲ್ಲಿ ಹಣಕಾಸು ಮತ್ತು ಶಿಕ್ಷಣ ಸಚಿವರಾಗಿದ್ದ ಸಿಸೋಡಿಯಾ ಮತ್ತು ಪಿಡಬ್ಲ್ಯುಡಿ ಹಾಗೂ ಇತರ ಖಾತೆಗಳ ಸಚಿವರಾಗಿದ್ದ ಜೈನ್ ಅವರನ್ನು ಕೇಂದ್ರ ಜಾಗ್ರತ ಆಯೋಗ(ಸಿವಿಸಿ)ವು ಗುರುತಿಸಿರುವ ಲೋಪಗಳಿಗೆ ಸಂಬಂಧಿಸಿದಂತೆ ಪ್ರಶ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸಿವಿಸಿಯ ಮುಖ್ಯ ತಾಂತ್ರಿಕ ಪರೀಕ್ಷಕರ ವರದಿಯು ಯೋಜನೆಯಲ್ಲಿನ ಹಲವಾರು ಲೋಪಗಳನ್ನು ಬೆಟ್ಟು ಮಾಡಿದೆ. ಸುಮಾರು ಮೂರು ವರ್ಷಗಳ ಕಾಲ ಈ ವರದಿಯ ಮೇಲೆ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ ಎಂದು ಜಂಟಿ ಪೋಲಿಸ್ ಆಯುಕ್ತ(ಎಸಿಬಿ) ಮಧುರ ವರ್ಮಾ ತಿಳಿಸಿದರು.

ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡ ಬಳಿಕ ಭ್ರಷ್ಟಾಚಾರ ತಡೆ ಕಾಯ್ದೆಯ ಕಲಂ 17ಎ ಅಡಿ ಎಫ್‌ಐಆರ್ ದಾಖಲಿಸಲಾಗಿತ್ತು ಎಂದರು.

2019ರಲ್ಲಿ ಬಿಜೆಪಿ ನಾಯಕರಾದ ಕಪಿಲ ಮಿಶ್ರಾ,ಹರೀಶ ಖುರಾನಾ ಮತ್ತು ನೀಲಕಂಠ ಭಕ್ಷಿ ಅವರು ದಿಲ್ಲಿಯ ಮೂರು ವಲಯಗಳಲ್ಲಿ ತರಗತಿ ಕೊಠಡಿಗಳ ನಿರ್ಮಾಣದಲ್ಲಿ ಗಂಭೀರ ಹಣಕಾಸು ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಎಸಿಬಿಗೆ ದೂರು ಸಲ್ಲಿಸಿದ್ದರು.

ಪ್ರತಿ ತರಗತಿ ಕೊಠಡಿಯ ಸರಾಸರಿ ನಿರ್ಮಾಣ ವೆಚ್ಚ 24.86 ಲ.ರೂ.ಗಳೆಂದು ತೋರಿಸಲಾಗಿದೆ,ಇದು ಇಂತಹುದೇ ನಿರ್ಮಾಣಗಳಿಗೆ ತಗಲುವ ಅಂದಾಜು ವೆಚ್ಚ ಐದು ಲ.ರೂ.ಗಳಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಪ್ರಸ್ತುತ ತನಿಖೆ ಪ್ರಗತಿಯಲ್ಲಿದ್ದು,ಅದರ ಫಲಿತಾಂಶಗಳ ಆಧಾರದಲ್ಲಿ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

►ಆರೋಪಗಳು ಸುಳ್ಳು,ಇದು ಶುದ್ಧ ರಾಜಕೀಯ: ಆಪ್

ಸಮನ್ಸ್‌ಗೆ ಪ್ರತಿಕ್ರಿಯಿಸಿರುವ ಆಪ್,ಯಾವುದೇ ರೀತಿಯಲ್ಲಿಯೂ ಇದು ಹಗರಣವಲ್ಲ. ಇದು ಬಿಜೆಪಿಯ ವ್ಯವಸ್ಥಿತ ರಾಜಕೀಯ ಪಿತೂರಿಯಾಗಿದೆ. ಅವರು ಆಪ್ ನಾಯಕರ ವಿರುದ್ಧ ದಾಳಿಗಳಿಗೆ ಮತ್ತು ಸುಳ್ಳು ನಿರೂಪಣೆಯನ್ನು ಸೃಷ್ಟಿಸಲು ಸಂಸ್ಥೆಗಳನ್ನು ಅಸ್ತ್ರಗಳನ್ನಾಗಿ ಬಳಸುತ್ತಿದ್ದಾರೆ. ಈ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಇದು ಶುದ್ಧ ರಾಜಕೀಯವಾಗಿದೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News