ದಿಲ್ಲಿಯ ವಾಯು ಗುಣಮಟ್ಟ ‘ಅತಿ ಕಳಪೆ’ ಮಟ್ಟಕ್ಕೆ ಇಳಿಕೆ
ಸಾಂದರ್ಭಿಕ ಚಿತ್ರ (credit: ANI)
ಹೊಸದಿಲ್ಲಿ: ದಿಲ್ಲಿಯ ವಾಯು ಗುಣಮಟ್ಟ ರವಿವಾರ ‘ಅತಿ ಕಳಪೆ’ ಮಟ್ಟಕ್ಕೆ ಇಳಿಕೆಯಾಗಿದೆ. ನಗರದ ತಾಪಮಾನ ಕೂಡಾ 15.8 ಡಿಗ್ರಿ ಸೆಲ್ಷಿಯಸ್ ಗೆ ಕುಸಿದಿದ್ದು, ಇದು ಕಳೆದೆರಡು ವರ್ಷಗಳಿಂದ ಅಕ್ಟೋಬರ್ ತಿಂಗಳಲ್ಲಿ ದಾಖಲಾಗಿರುವ ಅತ್ಯಂತ ಕನಿಷ್ಠ ತಾಪಮಾನವಾಗಿದೆ.
ನಗರದಲ್ಲಿನ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 324 ದಾಖಲಾಗಿದ್ದು, ಇದು ‘ಅತಿ ಕಳಪೆ’ ಮಟ್ಟವಾಗಿದೆ. ಶುಕ್ರವಾರದ ವಾಯು ಗುಣಮಟ್ಟ 292 ಇತ್ತು. ಕಳೆದೆರಡು ದಿನಗಳಲ್ಲಿ ದಿಲ್ಲಿಯ ವಾಯು ಗುಣಮಟ್ಟ ‘ಕಳಪೆ’ ಮಟ್ಟದಲ್ಲಿತ್ತು.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ)ಯ ‘ಸಮೀರ್’ ಆ್ಯಪ್ ದತ್ತಾಂಶದ ಪ್ರಕಾರ, ದಿಲ್ಲಿಯ ಅರವಿಂದ ವಿಹಾರದಲ್ಲಿ 429 ಹಾಗೂ ವಜೀರ್ ಪುರದಲ್ಲಿ 400 ಎಕ್ಯೂಐ ದಾಖಲಾಗಿದ್ದು, ಇದು ಗಂಭೀರ ಮಟ್ಟವಾಗಿದೆ. ನಗರದಲ್ಲಿರುವ 28 ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳಲ್ಲಿ 300ಕ್ಕೂ ಅಧಿಕ ಎಕ್ಯೂಐ ದಾಖಲಾಗಿದ್ದು, ಇದು ‘ಅತಿ ಕಳಪೆ’ ಮಟ್ಟವಾಗಿದೆ.
ಈ ನಡುವೆ, ಅಕ್ಟೋಬರ್ ತಿಂಗಳ ಕನಿಷ್ಠ ತಾಪಮಾನ 15.8 ಡಿಗ್ರಿ ಸೆಲ್ಷಿಯಸ್ ದಾಖಲಾಗಿದ್ದು, ಈ ಹಿಂದೆ 2023ರಲ್ಲಿ ದಾಖಲಾಗಿದ್ದ 15.9 ಡಿಗ್ರಿ ಸೆಲ್ಷಿಯಸ್ ಈವರೆಗಿನ ಅಕ್ಟೋಬರ್ ತಿಂಗಳ ಅತ್ಯಂತ ಕನಿಷ್ಠ ತಾಪಮಾನವಾಗಿತ್ತು.