ದಿಲ್ಲಿ ವಿಧಾನ ಸಭಾ ಚುನಾವಣೆ | ಮಾದರಿ ನೀತಿ ಸಂಹಿತೆ ಉಲ್ಲಂಘನೆಯ 700 ಪ್ರಕರಣ ದಾಖಲು
PC : PTI
ಹೊಸದಿಲ್ಲಿ: ಫೆಬ್ರವರಿ 5ರಂದು ನಡೆಯಲಿರುವ ದಿಲ್ಲಿ ವಿಧಾನ ಸಭೆ ಚುನಾವಣೆಗೆ ಮುನ್ನ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ 700ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಜನವರಿ 7 ಹಾಗೂ ಜನವರಿ 25ರ ನಡುವೆ ಈ ಪ್ರಕರಣಗಳು ದಾಖಲಾಗಿವೆ ಎಂದು ಅವರು ಹೇಳಿದ್ದಾರೆ.
ಈ ಅವಧಿಯಲ್ಲಿ ಅಬಕಾರಿ ಕಾಯ್ದೆ ಅಡಿ ಸೇರಿದಂತೆ ವಿವಿಧ ಕಾನೂನು ನಿಯಮಗಳ ಅಡಿಯಲ್ಲಿ ಒಟ್ಟು 21,841 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಚುನಾವಣೆಯ ಹಿನ್ನೆಲೆಯಲ್ಲಿ ಪೊಲೀಸರು ಗಡಿ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆಯನ್ನು ತೀವ್ರಗೊಳಿಸಿದ್ದಾರೆ. ಶಸ್ತ್ರಾಸ್ತ್ರ, ಮದ್ಯ ಹಾಗೂ ಮಾದಕ ದ್ರವ್ಯ ಸಾಗಾಟ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಆರೋಪದಲ್ಲಿ 718 ಪ್ರಕರಣಗಳನ್ನು ದಿಲ್ಲಿ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ, 348 ಅಕ್ರಮ ಶಸ್ತ್ರಾಸ್ತ್ರ ಹಾಗೂ 439 ಕಾಟ್ರಿಜ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
1.7 ಕೋ.ರೂ.ಗೂ ಅಧಿಕ ಮೌಲ್ಯದ 57,504 ಲೀಟರ್ ಮದ್ಯ, 72 ಕೋ.ರೂ.ಗೂ ಅಧಿಕ ಮೌಲ್ಯದ 155.08 ಕಿ.ಗ್ರಾಂ ಮಾದಕ ದ್ರವ್ಯ ಹಾಗೂ 1,200ಕ್ಕೂ ಅಧಿಕ ನಿಷೇಧಿತ ಇಂಜೆಕ್ಷನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆ ತಿಳಿಸಿದೆ.