ದಿಲ್ಲಿ ವಿಧಾನಸಭಾ ಚುನಾವಣೆ | ಓಖ್ಲಾ, ಮುಸ್ತಫಾಬಾದ್ ಕ್ಷೇತ್ರಗಳಲ್ಲಿ ದ್ವಿತೀಯ ರನ್ನರ್ ಅಪ್ ಗಳಾದ ಎಐಎಂಐಎಂ ಅಭ್ಯರ್ಥಿಗಳು!
ಅಸದುದ್ದೀನ್ ಉವೈಸಿ | PC : PTI
ಹೊಸದಿಲ್ಲಿ: ಅಸದುದ್ದೀನ್ ಉವೈಸಿ ನೇತೃತ್ವದ ಎಐಎಂಐಎಂ ಪಕ್ಷ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಓಖ್ಲಾ ಹಾಗೂ ಮುಸ್ತಫಾಬಾದ್ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿತ್ತು. ಈ ಎರಡೂ ಕ್ಷೇತ್ರಗಳಲ್ಲಿ ತಮ್ಮ ಅಸ್ತಿತ್ವವನ್ನು ಪ್ರದರ್ಶಿಸಿರುವ ಎಐಎಂಐಎಂ ಅಭ್ಯರ್ಥಿಗಳು, ದ್ವಿತೀಯ ರನ್ನರ್ ಅಪ್ ಗಳಾಗಿ ಹೊರಹೊಮ್ಮಿದ್ದಾರೆ.
2020ರ ದಿಲ್ಲಿ ಗಲಭೆಯಲ್ಲಿ ಆರೋಪಿಗಳಾಗಿ, ಸದ್ಯ ಜೈಲಿನಲ್ಲಿರುವ ಎಐಎಂಐಎಂ ಪಕ್ಷದ ಇಬ್ಬರೂ ಅಭ್ಯರ್ಥಿಗಳಾದ ಶಿಫಾ ಉರ್ ರೆಹಮಾನ್ ಖಾನ್ ಹಾಗೂ ತಾಹಿರ್ ಹುಸೈನ್, ಬಿಜೆಪಿ ಹಾಗೂ ಆಪ್ ಪಕ್ಷಗಳ ಮತ ಬುಟ್ಟಿಗೆ ಕನ್ನ ಕೊರೆದಿದ್ದು, ಕಾಂಗ್ರೆಸ್ ಗಿಂತ ಉತ್ತಮ ಪ್ರದರ್ಶನ ತೋರಿದ್ದಾರೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಲ್ಕನೆ ಸ್ಥಾನಕ್ಕೆ ಕುಸಿದಿದೆ.
ಚುನಾವಣಾ ಆಯೋಗದ ಪ್ರಕಾರ, ಓಖ್ಲಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅಮಾನುಲ್ಲಾ ಖಾನ್ 23,639 ಮತಗಳಿಂದ ಗೆಲುವು ಸಾಧಿಸಿದ್ದು, ಎರಡನೆಯವರಾಗಿರುವ ಬಿಜೆಪಿ ಅಭ್ಯರ್ಥಿ ಮನೀಶ್ ಚೌಧರಿ 65,304 ಮತಗಳನ್ನು ಗಳಿಸಿದ್ದಾರೆ. ಸದ್ಯ ತಿಹಾರ್ ಜೈಲಿನಲ್ಲಿರುವ ಶಿಫಾ ಉರ್ ರೆಹಮಾನ್ ಖಾನ್ 39,558 ಮತಗಳನ್ನು ಪಡೆದಿದ್ದಾರೆ.
ಇದೇ ರೀತಿ, ಮುಸ್ತಫಾಬಾದ್ ಕ್ಷೇತ್ರದಲ್ಲಿ 33,474 ಮತಗಳನ್ನು ಪಡೆದಿರುವ ಎಐಎಂಐಎಂ ಅಭ್ಯರ್ಥಿ ತಾಹಿರ್ ಹುಸೈನ್, ಎರಡನೆ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಮುಸ್ತಫಾಬಾದ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಮೋಹನ್ ಸಿಂಗ್ ಬಿಶ್ಟ್, ಆಪ್ ಪಕ್ಷದ ಅಭ್ಯರ್ಥಿ ಅದೀಲ್ ಅಹ್ಮದ್ ಖಾನ್ ರನ್ನು 17,579 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಲ್ಕನೆ ಸ್ಥಾನಕ್ಕೆ ಕುಸಿದಿದ್ದು, ಮುಸ್ತಫಾಬಾದ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಲಿ ಮೆಹದಿ 11,763 ಮತಗಳನ್ನು ಮಾತ್ರ ಪಡೆದಿದ್ದರೆ, ಓಖ್ಲಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅರೀಬಾ ಖಾನ್ 12,739 ಮತಗಳನ್ನಷ್ಟೆ ಗಳಿಸಲು ಶಕ್ತರಾಗಿದ್ದಾರೆ.