×
Ad

ದಿಲ್ಲಿ ವಿಧಾನಸಭಾ ಚುನಾವಣೆ | ಕಾಂಗ್ರೆಸ್-ಆಪ್ ಕಚ್ಚಾಟದಿಂದ ದಿಲ್ಲಿ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು: ಶಿವಸೇನೆ ಮುಖವಾಣಿ ‘ಸಾಮ್ನಾ’

Update: 2025-02-10 17:25 IST

PC : PTI 

ಮುಂಬೈ: ಇಂಡಿಯಾ ಮೈತ್ರಿಕೂಟದ ಅಂಗಪಕ್ಷಗಳಾದ ಕಾಂಗ್ರೆಸ್ ಹಾಗೂ ಆಪ್ ನಡುವಿನ ಕಿತ್ತಾಟದಿಂದ ದಿಲ್ಲಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದು ಸೋಮವಾರ ಶಿವಸೇನೆ (ಉದ್ಧವ್ ಬಣ) ಪ್ರತಿಪಾದಿಸಿದೆ.

ಒಂದು ವೇಳೆ ವಿರೋಧ ಪಕ್ಷಗಳ ಮೈತ್ರಿಕೂಟದ ಅಂಗಪಕ್ಷಗಳೇ ಬಿಜೆಪಿಯ ಬದಲು ಪರಸ್ಪರ ಹೋರಾಡುತ್ತಿದ್ದರೆ, ವಿರೋಧ ಪಕ್ಷಗಳ ಮೈತ್ರಿಕೂಟದ ಅಗತ್ಯವೇನಾದರೂ ಏನಿದೆ ಎಂದು ‘ಸಾಮ್ನಾ’ ಸಂಪಾದಕೀಯದಲ್ಲಿ ಪ್ರಶ್ನಿಸಲಾಗಿದೆ.

“ದಿಲ್ಲಿಯಲ್ಲಿ ಪರಸ್ಪರರನ್ನು ನಾಶ ಮಾಡಲು ಕಾಂಗ್ರೆಸ್ ಹಾಗೂ ಆಪ್ ಹೋರಾಟ ನಡೆಸಿದ್ದರಿಂದ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಸುಲಭವಾಯಿತು. ಇದು ಮುಂದುವರಿಯುವುದಾದರೆ, ಮೈತ್ರಿಕೂಟಗಳನ್ನಾದರೂ ಏಕೆ ರಚಿಸಬೇಕು? ನಿಮ್ಮ ಹೃದಯದ ಸಮಾಧಾನಕ್ಕೆ ಹೋರಾಡಲು ಮಾತ್ರ!” ಎಂದು ಸಂಪಾದಕೀಯದಲ್ಲಿ ತರಾಟೆಗೆ ತೆಗೆದುಕೊಳ್ಳುಲಾಗಿದೆ.

ವಿರೋಧ ಪಕ್ಷಗಳ ನಡುವಿನ ಇಂತಹುದೇ ಅನೈಕ್ಯತೆಯಿಂದಾಗಿ ಮಹಾರಾಷ್ಟ್ರದಲ್ಲಿ ಹಿನ್ನೆಡೆಯಾಗಿದೆ ಎಂಬುದರತ್ತಲೂ ಸಂಪಾದಕೀಯದಲ್ಲಿ ಬೊಟ್ಟು ಮಾಡಲಾಗಿದೆ. ದಿಲ್ಲಿ ಚುನಾವಣಾ ಫಲಿತಾಂಶದಿಂದ ಕಲಿಯಲು ವಿಫಲವಾದರೆ, ಅದು ನಿರಂಕುಶ ಆಡಳಿತವನ್ನಷ್ಟೇ ಬಲಪಡಿಸಲಿದೆ ಎಂದು ಎಚ್ಚರಿಸಲಾಗಿದೆ.

ಗಮನಾರ್ಹ ಸಂಗತಿಯೆಂದರೆ, ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ಹೋರಾಡಿದ್ದ ಕಾಂಗ್ರೆಸ್ ಹಾಗೂ ಆಪ್ ಪಕ್ಷಗಳನ್ನು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಕೂಡಾ ವ್ಯಂಗ್ಯವಾಡಿದ್ದರು. “ಪರಸ್ಪರ ಕಿತ್ತಾಡುತ್ತಲೇ ಇರಿ!” ಎಂದು ಅವರು ಎಕ್ಸ್ ನಲ್ಲಿ ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದರು.

ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಆಪ್ ಅನ್ನು ಸೋಲಿಸಿದ ಬಿಜೆಪಿ, 70 ಸ್ಥಾನಗಳ ಪೈಕಿ 48 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ದಿಲ್ಲಿ ಗದ್ದುಗೆ ಹಿಡಿದಿದೆ. 2020ರ ವಿಧಾನಸಭಾ ಚುನಾವಣೆಯಲ್ಲಿ 62 ಸ್ಥಾನಗಳಲ್ಲಿ ಭಾರಿ ಜಯಭೇರಿ ಬಾರಿಸಿದ್ದ ಆಪ್, ಈ ಬಾರಿ ಕೇವಲ 22 ಸ್ಥಾನಗಳಿಗೆ ಕುಸಿದಿದೆ. ಆಪ್ ನ ಈ ಹೀನಾಯ ಸೋಲಿಗೆ ಆಪ್ ಮತ್ತು ಕಾಂಗ್ರೆಸ್ ಪಕ್ಷಗಳು ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗಿದ್ದೇ ಕಾರಣ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News