ಸಂಸ್ಕೃತ ʼಅತ್ಯಂತ ವೈಜ್ಞಾನಿಕʼ ಭಾಷೆ, ನಾಸಾ ಕೂಡ ಈ ಬಗ್ಗೆ ಪ್ರಬಂಧ ಬರೆದಿದೆ: ದಿಲ್ಲಿ ಸಿಎಂ ರೇಖಾ ಗುಪ್ತಾ
ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ (PTI)
ಹೊಸದಿಲ್ಲಿ : ಸಂಸ್ಕೃತ ಅತ್ಯಂತ ವೈಜ್ಞಾನಿಕ ಮತ್ತು ಕಂಪ್ಯೂಟರ್ ಸ್ನೇಹಿ ಭಾಷೆ, ನಾಸಾ ಕೂಡ ಈ ಬಗ್ಗೆ ಪ್ರಬಂಧ ಬರೆದಿದೆ ಎಂದು ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿದ್ದಾರೆ.
ದಿಲ್ಲಿ ಸರಕಾರ ಮತ್ತು ಸಂಸ್ಕೃತ ಭಾರತಿ ಎಂಬ ಸರಕಾರೇತರ ಸಂಸ್ಥೆಯ ಸಹಯೋಗದೊಂದಿಗೆ ಎಪ್ರಿಲ್ 23ರಂದು ಪ್ರಾರಂಭವಾದ ಸಂಸ್ಕೃತ ಕಲಿಕಾ ಉಪಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರೇಖಾ ಗುಪ್ತಾ, ಭಾರತದ ಭವ್ಯ ಇತಿಹಾಸವನ್ನು ಈ ಭಾಷೆಯಲ್ಲಿ ಬರೆಯಲಾಗಿದೆ. ನಮ್ಮ ಸಂಸ್ಕೃತಿಯನ್ನು ಅದರಲ್ಲಿ ದಾಖಲಿಸಲಾಗಿದೆ ಮತ್ತು ಪ್ರಪಂಚದಾದ್ಯಂತ 60ಕ್ಕೂಅಧಿಕ ವಿಶ್ವವಿದ್ಯಾಲಯಗಳಲ್ಲಿ ಇದನ್ನು ಕಲಿಸಲಾಗುತ್ತಿದೆ. ಸಂಶೋಧನೆ ಮಾಡುವಾಗ, ನಾಸಾ ವಿಜ್ಞಾನಿಗಳು ಕೂಡ ಇದರ ಬಗ್ಗೆ ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ ಎಂದು ನಾನು ಕಂಡುಕೊಂಡೆ. ಸಂಸ್ಕೃತವು ವೈಜ್ಞಾನಿಕ ಭಾಷೆಯಾಗಿದೆ. ನಾಸಾ ವಿಜ್ಞಾನಿಗಳು ಕೂಡ ಪ್ರಾಚೀನ ಭಾರತೀಯ ಭಾಷೆಯ ಕೋಡಿಂಗ್ ಮತ್ತು ಇತರ ವೈಜ್ಞಾನಿಕ ಕೆಲಸಗಳ ಸಾಮರ್ಥ್ಯದ ಬಗ್ಗೆ ಗುರುತಿಸಿದ್ದಾರೆ ಎಂದು ಹೇಳಿದರು.
ದೇಶಾದ್ಯಂತ ಮಾತನಾಡುವ ಅನೇಕ ಭಾರತೀಯ ಭಾಷೆಗಳಂತೆ ಸಂಸ್ಕೃತವು ಭಾರತೀಯ ಸಂಸ್ಕೃತಿಯ ಅಡಿಪಾಯವಾಗಿದೆ. ಪ್ರತಿಯೊಂದು ರಾಜ್ಯಕ್ಕೂ ಒಂದು ಮಾತೃಭಾಷೆ ಇದೆ. ಆದರೆ ವಾಸ್ತವದಲ್ಲಿ ಪ್ರತಿಯೊಂದು ಭಾಷೆಯೂ ಸಂಸ್ಕೃತದಿಂದ ಬಂದಿರುವುದರಿಂದ ಸಂಸ್ಕೃತ ನಮ್ಮ ಮಾತೃಭಾಷೆಯಾಗಿದೆ. ಹಿಂದಿ, ಮರಾಠಿ, ಬಂಗಾಳಿ, ಸಿಂಧಿ, ಮಲಯಾಳಂ ಇವೆಲ್ಲವೂ ಸಂಸ್ಕೃತದ ಭಾಗವಾಗಿವೆ ಎಂದು ಹೇಳಿದರು.
ಭಾರತ ವಿಶ್ವ ಗುರು ಆಗಲು ಬಯಸಿದರೆ, ನಾವು ಸಂಸ್ಕೃತದ ಮೂಲಕ ಆಳವಾದ ಜ್ಞಾನವನ್ನು ಪಡೆಯಬೇಕು. ಇದು ಒಂದು ಕಾಲದಲ್ಲಿ ನಮ್ಮ ವಿಜ್ಞಾನ, ವ್ಯವಹಾರಗಳು ಮತ್ತು ಸಂಸ್ಕೃತಿಯನ್ನು ನಡೆಸುತ್ತಿದ್ದ ಭಾಷೆಯಾಗಿದೆ ಎಂದು ರೇಖಾ ಗುಪ್ತಾ ಹೇಳಿದರು.