ಕೇಜ್ರಿವಾಲ್ ಗೆ ದಿಲ್ಲಿ ಕೋರ್ಟ್ ಸಮನ್ಸ್ | ಮಾ.16ರಂದು ಹಾಜರಾಗುವಂತೆ ಆದೇಶ
ಅರವಿಂದ ಕೇಜ್ರಿವಾಲ್ | Photo: PTI
ಹೊಸದಿಲ್ಲಿ : ದಿಲ್ಲಿ ಮದ್ಯ ನೀತಿಯಲ್ಲಿ ನಡೆದಿದೆಯೆನ್ನಲಾದ ಕಪ್ಪುಹಣ ಬಿಳುಪು ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಈಡಿ) ನೀಡಿದ ದೂರಿನ ಮೇರೆಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ದಿಲ್ಲಿಯ ರೋಸ್ ಅವೆನ್ಯೂದ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿದ್ದು, ಮಾರ್ಚ್ 16ರಂದು ತನ್ನ ಮುಂದೆ ಹಾಜರಾಗುವಂತೆ ತಿಳಿಸಿದೆ.
ದಿಲ್ಲಿ ಮದ್ಯನೀತಿಯಲ್ಲಿ ನಡೆದಿದೆಯೆನ್ನಲಾದ ಕಪ್ಪುಹಣ ಬಿಳುಪು ಪ್ರಕರಣದಲ್ಲಿ ತಾನು ನೀಡಿದ ಸಮನ್ಸ್ ಗಳನ್ನು ಕೇಜ್ರಿವಾಲ್ ಪಾಲಿಸುತ್ತಿಲ್ಲವೆಂದು ಜಾರಿನಿರ್ದೇಶನಾಲಯ (ಈಡಿ) ಎರಡನೆ ಬಾರಿ ದೂರು ನೀಡಿದ ಬಳಿಕ ರೋಸ್ ಅವೆನ್ಯೂ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿದೆ.
ಕಪ್ಪುಹಣ ಬಿಳುಪು ಪ್ರಕರಣದಲ್ಲಿ ತಾನು ಕೇಜ್ರಿವಾಲ್ ಅವರಿಗೆ ಹಲವು ಬಾರಿ ಸಮನ್ಸ್ ಗನ್ನು ನೀಡಿದ್ದರೂ, ಅವರು ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದರು . ಎಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ತಿಳಿಸಿತ್ತು. ಕಪ್ಪುಹಣ ಬಿಳುಪು ತಡೆ ಕಾಯ್ದೆಯ ಸೆಕ್ಷನ್ 50ರಡಿ ತಾನು ಕಳುಹಿಸಿದ 4ರಿಂದ 8 ಸಮನ್ಸ್ ಗಳನ್ನು ಕೇಜ್ರಿವಾಲ್ ಕಡೆಗಣಿಸಿದ್ದಾರೆಂದು ಅದು ದೂರಿದೆ.
ಪ್ರಕರಣದ ಮುಂದಿನ ಆಲಿಕೆಯನ್ನು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ದಿವ್ಯಾ ಮಲ್ಹೋತ್ರಾ ಅವರು ಮಾಚ್ 16ಕ್ಕೆ ನೀಗದಿಪಡಿಸಿದ್ದಾರೆ.
ಕಪ್ಪುಹಣ ಬಿಳುಪುಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಎಂಟು ಸಮನ್ಸ್ ಗಳನ್ನೂ ನೀಡಿದ್ದರೂ, ಕೇಜ್ರಿವಾಲ್ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಮಾರ್ಚ್ 12ರ ಆನಂತರ ವಿಡಿಯೋಕಾನ್ಫರೆನ್ಸಿಂಗ್ ಮೂಲಕ ತನ್ನನ್ನು ಪ್ರಶ್ನಿಸಬಹುದೆಂದು ಅವರು ಮಾರ್ಚ್ 4ರಂದು ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದ್ದರು.