ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲೂ, ತೇಜಸ್ವಿ ಯಾದವ್ ಗೆ ದಿಲ್ಲಿ ನ್ಯಾಯಾಲಯದಿಂದ ಸಮನ್ಸ್
ಹೊಸದಿಲ್ಲಿ: ಉದ್ಯೋಗಕ್ಕಾಗಿ ಭೂಮಿ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್, ರಾಬ್ರಿ ದೇವಿ, ತೇಜಸ್ವಿ ಯಾದವ್ ಹಾಗೂ ಇನ್ನಿತರ 14 ಮಂದಿ ಆರೋಪಿಗಳಿಗೆ ದಿಲ್ಲಿ ನ್ಯಾಯಾಲಯವೊಂದು ಸಮನ್ಸ್ ಜಾರಿಗೊಳಿಸಿದೆ.
ಜುಲೈ 3ರಂದು ಸಿಬಿಐ ಸಲ್ಲಿಸಿರುವ ಹೊಸ ದೋಷಾರೋಪ ಪಟ್ಟಿಯನ್ನು ಪರಿಗಣನೆಗೆ ತೆಗೆದುಕೊಂಡಿರುವ ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯಲ್, ಎಲ್ಲ ಆರೋಪಿಗಳಿಗೂ ಅಕ್ಟೋಬರ್ 4ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದ್ದಾರೆ.
ಜುಲೈ 3ರಂದು ಸಿಬಿಐ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಆರ್ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್, ರಾಬ್ರಿ ದೇವಿ, ತೇಜಸ್ವಿ ಯಾದವ್ ಹಾಗೂ ಇನ್ನಿತರ 14 ಮಂದಿಯನ್ನು ಉದ್ಯೋಗಕ್ಕಾಗಿ ಭೂಮಿ ಪ್ರಕರಣದಲ್ಲಿ ಹೆಸರಿಸಲಾಗಿದೆ.
ಲಾಲೂ ಪ್ರಸಾದ್ ಯಾದವ್ ಹಾಗೂ ರೈಲ್ವೆಯ ಮೂವರು ಅಧಿಕಾರಿಗಳಾದ ಮಹೀಪ್ ಕಪೂರ್, ಮನೋಜ್ ಪಾಂಡೆ ಹಾಗೂ ಪಿ.ಎಲ್. ಬಂಕರ್ ಅವರನ್ನು ವಿಚಾರಣೆಗೊಳಪಡಿಸಲು ಸರಕಾರದ ಅನುಮತಿ ಬೇಕಾಗಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ಈ ನಡುವೆ, ಕಪೂರ್, ಪಾಂಡೆ ಹಾಗೂ ಬಂಕರ್ ಅವರನ್ನು ವಿಚಾರಣೆಗೊಳಪಡಿಸಲು ಅನುಮತಿ ಸ್ವೀಕರಿಸಿದ್ದೇವೆ ಎಂದು ಗುರುವಾರ ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.