ದಿಲ್ಲಿ ಚುನಾವಣಾ ಫಲಿತಾಂಶ | ಸ್ವಾತಿ ಮಲಿವಾಲ್ ಗೇಮ್ ಚೇಂಜರ್ ಎಂದ ಸಾಮಾಜಿಕ ಜಾಲತಾಣ ಬಳಕೆದಾರರು
ಸ್ವಾತಿ ಮಲಿವಾಲ್ | PC : freepressjournal.in
ಹೊಸದಿಲ್ಲಿ: ದಿಲ್ಲಿ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಈವರೆಗಿನ ಫಲಿತಾಂಶವು ಬಹುಮತದ ಗಡಿ ದಾಟುವಲ್ಲಿ ಬಿಜೆಪಿ ಯಶಸ್ವಿಯಾಗಿರುವುದನ್ನು ತೋರಿಸುತ್ತದೆ. ಈ ವಿಜಯವು ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ 27 ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೇರುವುದನ್ನು ಸೂಚಿಸುತ್ತದೆ.
10 ವರ್ಷಗಳ ಅಧಿಕಾರದ ನಂತರ ಕೇಂದ್ರಾಡಳಿತ ಪ್ರದೇಶ ದಿಲ್ಲಿಯಲ್ಲಿ ಎಎಪಿ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿರುವ ಮಧ್ಯೆ ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಸಿಎಂ ಕಚೇರಿಯಲ್ಲಿ ದಾಳಿ ನಂತರ ಮಲಿವಾಲ್ ಮತ್ತು ಕೇಜ್ರಿವಾಲ್ ನಡುವಿನ ಆಂತರಿಕ ಕಲಹವು ಎಎಪಿ ಪಕ್ಷದ ಅಧಃಪತನಕ್ಕೆ ಮುನ್ನುಡಿ ನೀಡಿದೆ ಎಂದು ಕೆಲ ಸಾಮಾಜಿಕ ಜಾಲತಾಣದ ಬಳಕೆದಾರರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಕುರಿತು ಹಲವರು ಪೋಸ್ಟ್ ಮಾಡಿದ್ದು, ಎಎಪಿಯ ರಾಜ್ಯ ಸಭೆ ಸಂಸದೆಯಾಗಿರುವ ಸ್ವಾತಿ ಮಲಿವಾಲ್ ಗೆ ದಿಲ್ಲಿ ಚುನಾವಣಾ ಫಲಿತಾಂಶ ಸಂತೋಷ ತಂದಿರಬಹುದು. ಸ್ವಾತಿ ಮಲಿವಾಲ್ ಗೇಮ್ ಚೇಂಜರ್ ಎಂದು ಟ್ವೀಟ್ ಮಾಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ನನ್ನ ಮೇಲೆ ದಾಳಿ ನಡೆದಿದೆ ಎಂದು ಎಎಪಿಯ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಆರೋಪಿಸಿದ ಬಳಿಕ ಭಿನ್ನಾಭಿಪ್ರಾಯ ತೀವ್ರಗೊಂಡಿತ್ತು. ಎಎಪಿ ನಾಯಕತ್ವವು ತನ್ನನ್ನು ನಿರ್ಲಕ್ಷಿಸಿದೆ ಎಂದು ಮಲಿವಾಲ್ ಆರೋಪಿಸಿದ್ದರು.
ಸ್ವಾತಿ ಮಲಿವಾಲ್ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದ ಎಎಪಿಯ ಕೆಲ ನಾಯಕರು ಸ್ವಾತಿ ಮಲಿವಾಲ್ ಬಿಜೆಪಿಯ ಏಜೆಂಟ್ ಎಂದು ಪ್ರತ್ಯಾರೋಪ ಮಾಡಿದ್ದರು.
ಇತ್ತೀಚೆಗೆ ದಿಲ್ಲಿಯಲ್ಲಿ ಕಸ ವಿಲೇವಾರಿ, ಕಲುಷಿತ ನೀರು ಪೂರೈಕೆ ಕುರಿತು ಎಎಪಿ ಸರಕಾರವನ್ನು ಸ್ವಾತಿ ಮಲಿವಾಲ್ ತರಾಟೆಗೆ ತೆಗೆದುಕೊಂಡಿದ್ದರು. ಇದು ರಾಜ್ಯದಲ್ಲಿ ಜನಾಭಿಪ್ರಾಯ ಬದಲಾವಣೆಗೆ ಕಾರಣ ಎಂದು ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.