ದಿಲ್ಲಿ ಅಬಕಾರಿ ನೀತಿ ಹಗರಣ ; 6ನೇ ಸಮನ್ಸ್ ಗೂ ಹಾಜರಾಗದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್ | Photo: ANI
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ಆರನೇ ಸಮನ್ಸ್ ಗೂ ಹಾಜರಾಗದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಅವರಿಗೆ 7ನೇ ಸಮನ್ಸ್ ಜಾರಿಗೊಳಿಸುವ ಸಾಧ್ಯತೆ ಇದೆ.
ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ನೀಡಿದ ಎಲ್ಲಾ 9 ಸಮನ್ಸ್ ಗಳಿಗೆ ಕೇಜ್ರಿವಾಲ್ ಅವರು ಹಾಜರಾಗಿರಲಿಲ್ಲ.
ಈ ಹಿಂದಿನ ಸಮನ್ಸ್ ಗಳಿಗೆ ಅವಿಧೇಯತೆ ತೋರಿರುವುದಕ್ಕೆ ಸ್ಥಳೀಯ ನ್ಯಾಯಾಲಯ ಕೇಜ್ರಿವಾಲ್ ಅವರನ್ನು ಮೇಲ್ನೋಟಕ್ಕೆ ದೋಷಿ ಎಂದು ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಅವರಿಗೆ 7ನೇ ಸಮನ್ಸ್ ಜಾರಿಗೊಳಿಸುವ ಸಾಧ್ಯತೆ ಇದೆ.
ಈ ನಡುವೆ ಆಮ್ ಆದ್ಮಿ ಪಕ್ಷ, ಜಾರಿ ನಿರ್ದೇಶನಾಲಯ ಕೇಜ್ರಿವಾಲ್ ಅವರಿಗೆ ಮತ್ತೆ ಮತ್ತೆ ಸಮನ್ಸ್ ಕಳುಹಿಸುವ ಬದಲು ನ್ಯಾಯಾಲಯದ ನಿರ್ಧಾರದ ವರೆಗೆ ಕಾಯಬೇಕು ಎಂದು ಹೇಳಿದೆ.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತನ್ನ ಸಮನ್ಸ್ ಗೆ ಅವಿಧೇಯತೆ ತೋರಿರುವುದಕ್ಕಾಗಿ ಜಾರಿ ನಿರ್ದೇಶನಾಲಯ ದಾಖಲಿಸಿದ ದೂರಿಗೆ ಸಂಬಂಧಿಸಿ ಕೇಜ್ರಿವಾಲ್ ಅವರಿಗೆ ಫೆಬ್ರವರಿ 17ರಂದು ವೈಯುಕ್ತಿಕವಾಗಿ ಹಾಜರಾಗುವುದರಿಂದ ದಿಲ್ಲಿ ನ್ಯಾಯಾಲಯ ವಿನಾಯತಿ ನೀಡಿತ್ತು. ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಮಾರ್ಚ್ 16ಕ್ಕೆ ಮುಂದೂಡಿತ್ತು. ಮುಂದಿನ ವಿಚಾರಣೆ ಸಂದರ್ಭ ಕೇಜ್ರಿವಾಲ್ ವೈಯುಕ್ತಿಕವಾಗಿ ಹಾಜರಾಗಲಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ.