ದಿಲ್ಲಿ ಸರಕಾರದಿಂದ 1.63 ಲಕ್ಷ ವಿದ್ಯಾರ್ಥಿಗಳಿಗೆ ಸಿಯುಇಟಿ, ನೀಟ್ ಗಾಗಿ ಉಚಿತ ಆನ್ಲೈನ್ ತರಬೇತಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : 12ನೇ ತರಗತಿಯ ಬಳಿಕ ಸಿಯುಇಟಿ (ಸಾಮಾನ್ಯ ವಿವಿ ಪ್ರವೇಶ ಪರೀಕ್ಷೆ) ಮತ್ತು ನೀಟ್ ಪರೀಕ್ಷೆಗಳಿಗೆ ಸಿದ್ಧತೆಗಾಗಿ ವಿದ್ಯಾರ್ಥಿಗಳಿಗೆ ಉಚಿತ ಅಲ್ಪಾವಧಿ ಕೋರ್ಸ್ಗಳನ್ನು ಒದಗಿಸಲು ದಿಲ್ಲಿ ಸರಕಾರವು ಗುರುವಾರ ಬಿಗ್ ಇನ್ಸ್ಟಿಟ್ಯೂಟ್ ಮತ್ತು ಫಿಜಿಕ್ಸ್ವಾಲಾ ಲಿ. ಜೊತೆ ಒಡಂಬಡಿಕೆಗೆ ಸಹಿ ಹಾಕಿದೆ.
ದಿಲ್ಲಿ ಶಿಕ್ಷಣ ನಿರ್ದೇಶನಾಲಯವು ಸಹಿ ಹಾಕಿರುವ ಯೋಜನೆಯು ಎನ್ಎಸ್ಡಿಸಿ ಇಂಟರ್ನ್ಯಾಷನಲ್, ಕೌಶಲ್ಯ ಸಚಿವಾಲಯ ಮತ್ತು ಭಾರತ ಸರಕಾರದ ಜಂಟಿ ಕ್ರಮವಾಗಿದ್ದು,1.63 ಲಕ್ಷ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಿಯುಇಟಿ ಮತ್ತು ನೀಟ್ಗಾಗಿ ಉಚಿತ ಆನ್ಲೈನ್ ತರಬೇತಿಯನ್ನು ಒದಗಿಸಲಿದೆ.
ಕಾರ್ಯಕ್ರಮವು ಎ.1ರಿಂದ ಆರಂಭಗೊಳ್ಳಲಿದ್ದು,ಪ್ರತಿ ದಿನಕ್ಕೆ ಆರು ಗಂಟೆಗಳಂತೆ 30 ದಿನಗಳಲ್ಲಿ 180 ಗಂಟೆಗಳ ತರಬೇತಿಯನ್ನು ಒಳಗೊಂಡಿರಲಿದೆ ಎಂದು ದಿಲ್ಲಿ ಶಿಕ್ಷಣ ಸಚಿವ ಆಶಿಷ್ ಸೂದ್ ತಿಳಿಸಿದರು.
ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ನೆರವಾಗುವುದು ಈ ಉಪಕ್ರಮದ ಗುರಿಯಾಗಿದೆ ಎಂದು ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿದರು.
ಈ ಉಪಕ್ರಮವು ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಲಿದ್ದು,ಆರ್ಥಿಕ ತೊಂದರೆಗಳು ಅವರ ಶೈಕ್ಷಣಿಕ ಆಕಾಂಕ್ಷೆಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಲಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.