×
Ad

ಎನ್‌ಡಿಎ ಫ್ಲೈಯಿಂಗ್ ಬ್ರ್ಯಾಂಚ್‌ಗೆ ಮಹಿಳೆಯನ್ನು ನೇಮಿಸಲು ಭಾರತೀಯ ವಾಯುಪಡೆಗೆ ದಿಲ್ಲಿ ಹೈಕೋರ್ಟ್ ಆದೇಶ

Update: 2025-08-31 15:39 IST
ಸಾಂದರ್ಭಿಕ ಚಿತ್ರ (Photo: PTI)

ಹೊಸದಿಲ್ಲಿ: ಅರ್ಹ ಮಹಿಳೆಯರು ಲಭ್ಯವಿದ್ದರೂ ಖಾಲಿ ಹುದ್ದೆಗಳನ್ನು ಭರ್ತಿ ಮಾಡದ ಹಿನ್ನೆಲೆಯಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯವು ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್‌ಡಿಎ) ಮತ್ತು ನೌಕಾ ಅಕಾಡೆಮಿ ಪರೀಕ್ಷೆ 2023ರಡಿ ಫ್ಲೈಯಿಂಗ್ ಬ್ರ್ಯಾಂಚ್‌ಗೆ ಮಹಿಳಾ ಅಭ್ಯರ್ಥಿಯೋರ್ವರನ್ನು ನೇಮಕ ಮಾಡುವಂತೆ ಭಾರತೀಯ ವಾಯುಪಡೆ(ಐಎಎಫ್)ಗೆ ಆದೇಶಿಸಿದೆ.

ಪರೀಕ್ಷೆಯನ್ನು ನಡೆಸುವ ಯುಪಿಎಸ್‌ಸಿ ಮೇ 17,2023ರ ನೇಮಕಾತಿ ಅಧಿಸೂಚನೆಯಲ್ಲಿ ಮಹಿಳೆಯರಿಗೆ ಮೀಸಲಾದ ಎರಡು ಹುದ್ದೆಗಳು ಸೇರಿದಂತೆ ಫ್ಲೈಯಿಂಗ್ ಬ್ರ್ಯಾಂಚ್‌ಗೆ 92 ಹುದ್ದೆಗಳನ್ನು ಪ್ರಕಟಿಸಿತ್ತು.

ಮಹಿಳೆಯರಿಗೆ ಮೀಸಲಾಗಿರುವ ಎರಡು ಹುದ್ದೆಗಳನ್ನು ಹೊರತುಪಡಿಸಿ ಯುಪಿಎಸ್‌ಸಿ ಅಧಿಸೂಚಿಸಿದ್ದ 90 ಹುದ್ದೆಗಳನ್ನು ಕೇವಲ ಪುರುಷ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ ಎಂದು ಪರಿಗಣಿಸುವಂತಿಲ್ಲ ಎಂದು ತೀರ್ಪಿನಲ್ಲಿ ತಿಳಿಸಿರುವ ನ್ಯಾಯಮೂರ್ತಿಗಳಾದ ಸಿ.ಹರಿಶಂಕರ ಮತ್ತು ಓಂ ಪ್ರಕಾಶ ಶುಕ್ಲಾ ಅವರ ಪೀಠವು,ಅವು ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ಮುಕ್ತವಾಗಿರುವ ಖಾಲಿ ಹುದ್ದೆಗಳಾಗಿದ್ದವು ಎಂದು ಹೇಳಿದೆ.

ಲಿಂಗ ತಟಸ್ಥತೆಯ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳ ಹಿನ್ನೆಲೆಯಲ್ಲಿ ಲಿಂಗ ಪ್ರಾಶಸ್ತ್ಯವನ್ನು ತಿರುಚುವ ರೀತಿಯಲ್ಲಿ ಜಾಹೀರಾತು ಅಥವಾ ಅಧಿಸೂಚನೆಯ ವ್ಯಾಖ್ಯಾನವನ್ನು ಅನುಮತಿಸಲು ಸಾಧ್ಯವಿಲ್ಲ ಎಂದು ಪೀಠವು ಹೇಳಿದೆ.

ಆಯ್ಕೆ ಪ್ರಕ್ರಿಯೆಯ ಎಲ್ಲ ಹಂತಗಳಲ್ಲಿ ಉತ್ತೀರ್ಣಗೊಂಡಿರುವ ಮತ್ತು ‘ವಿಮಾನವನ್ನು ಹಾರಿಸಲು ಅರ್ಹ’ ಎಂಬ ಕಡ್ಡಾಯ ಪ್ರಮಾಣಪತ್ರವನ್ನು ಹೊಂದಿರುವ ಮಹಿಳಾ ಅಭ್ಯರ್ಥಿಯೋರ್ವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಉಚ್ಚ ನ್ಯಾಯಾಲಯವು ಈ ತೀರ್ಪನ್ನು ಪ್ರಕಟಿಸಿದೆ.

ತನ್ನ ಕಕ್ಷಿದಾರರು ಅರ್ಹ ಮಹಿಳಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಏಳನೇ ಸ್ಥಾನವನ್ನು ಪಡೆದಿದ್ದರೂ ಮಹಿಳೆಯರಿಗೆ ಕೇವಲ ಎರಡು ಹುದ್ದೆಗಳನ್ನು ಮೀಸಲಿಟ್ಟಿರುವುದರಿಂದ ಅವರಿಗೆ ನೇಮಕಾತಿಯನ್ನು ನಿರಾಕರಿಸಲಾಗಿದೆ ಎಂದು ಹೇಳಿದ ಅರ್ಜಿದಾರರ ಪರ ವಕೀಲ ಸಾಹಿಲ್ ಮೊಂಗಿಯಾ ಅವರು,ಉಳಿದ 90 ಹುದ್ದೆಗಳಲ್ಲಿ ಕೇವಲ 70 ಹುದ್ದೆಗಳಿಗೆ ಪುರುಷ ಅಭ್ಯರ್ಥಿಗಳನ್ನು ಭರ್ತಿ ಮಾಡಲಾಗಿದೆ. 20 ಹುದ್ದೆಗಳು ಖಾಲಿಯಿದ್ದು,ಅವುಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳನ್ನು ನೇಮಕ ಮಾಡಬಹುದು ಎಂದು ವಾದಿಸಿದರು.

ಒಂದು ವಿಧಾನದಲ್ಲಿ ನೇಮಕಾತಿಯ ಮೂಲಕ ಅಧಿಕಾರಿಗಳ ಸೇರ್ಪಡೆಯಲ್ಲಿನ ಯಾವುದೇ ಕೊರತೆಯನ್ನು ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆ ಮತ್ತು ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆಯಂತಹ ಇತರ ವಿಧಾನಗಳ ಮೂಲಕ ಸರಿದೂಗಿಸಲಾಗುತ್ತದೆ,ಹೀಗಾಗಿ ಖಾಲಿಯಿರುವ 20 ಹುದ್ದೆಗಳು ವ್ಯರ್ಥವಾಗುವುದಿಲ್ಲ ಎಂದು ಕೇಂದ್ರವು ವಾದಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು ‘ಲಿಂಗ ಸಮತೋಲನವನ್ನು ಪ್ರತಿಬಿಂಬಿಸುವ ಕಾರ್ಯಪಡೆಯನ್ನು ಹೊಂದಲು ಸರಕಾರವು ಶ್ರಮಿಸುತ್ತದೆ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದನ್ನು ಉತ್ತೇಜಿಸಲಾಗುತ್ತದೆ’ ಎಂದು ಸ್ಪಷ್ಟವಾಗಿ ಹೇಳಿರುವ ಅಧಿಸೂಚನೆಗೆ ಇಂತಹ ದೃಷ್ಟಿಕೋನವು ವಿರುದ್ಧವಾಗಿದೆ ಎಂದು ಬೆಟ್ಟು ಮಾಡಿತು.

ಸಶಸ್ತ್ರ ಪಡೆಗಳು ಅಥವಾ ಇತರ ಯಾವುದೇ ಸೇವೆಯಲ್ಲಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳ ನಡುವೆ ತಾರತಮ್ಯ ಮಾಡುವ ಕಾಲವಿದಲ್ಲ ಎಂದು ಉಚ್ಚ ನ್ಯಾಯಾಲಯವು ಹೇಳಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News