ಆರ್ಥಿಕವಾಗಿ ಸ್ವತಂತ್ರವಾಗಿರುವ ಸಂಗಾತಿಗೆ ಜೀವನಾಂಶ ನೀಡಬೇಕಾಗಿಲ್ಲ: ದಿಲ್ಲಿ ಹೈಕೋರ್ಟ್
ರೈಲ್ವೆ ಅಧಿಕಾರಿ ಮಹಿಳೆಗೆ ಜೀವನಾಂಶ ನಿರಾಕರಿಸಿದ ನ್ಯಾಯಾಲಯ
ದಿಲ್ಲಿ ಹೈಕೋರ್ಟ್ |Photo Credit : PTI
ಹೊಸದಿಲ್ಲಿ,ಅ.10: ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ಸಂಗಾತಿಯು ಆರ್ಥಿಕವಾಗಿ ಸ್ವಾವಲಂಬಿ ಹಾಗೂ ಸ್ವತಂತ್ರರಾಗಿದ್ದಲ್ಲಿ ಆತ ಅಥವಾ ಆಕೆಗೆ ಜೀವನಾಂಶ ನೀಡಬೇಕಾಗಿಲ್ಲ ಎಂದು ದಿಲ್ಲಿ ಹೈಕೋರ್ಟ್ ಸೋಮವಾರ ತೀರ್ಪು ನೀಡಿದೆ.
ಶಾಶ್ವತವಾಗಿ ಜೀವನಾಂಶ ನೀಡುವುದು ಸಾಮಾಜಿಕ ನ್ಯಾಯದ ಕ್ರಮವಾಗಿದೆಯೇ ಹೊರತು ಇಬ್ಬರು ಸಮರ್ಥ ವ್ಯಕ್ತಿಗಳ ನಡುವಿನ ಆರ್ಥಿಕ ಸ್ಥಿತಿಯನ್ನು ಉತ್ತಮವಾಗಿಸುವ ಅಥವಾ ಸಮಾನವಾಗಿಸುವ ಸಾಧನವಾಗಿ ಅಲ್ಲ ಎಂದು ಅದು ಹೇಳಿದೆ.
ಜೀವನಾಂಶವನ್ನು ಕೋರುವ ವ್ಯಕ್ತಿಯು, ಆರ್ಥಿಕ ನೆರವಿನ ನಿಜವಾದ ಅಗತ್ಯವಿರುವುದನ್ನು ನಿರೂಪಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರಪಾಲ ಹಾಗೂ ಹರೀಶ್ ವೈದ್ಯನಾಥನ್ ಶಂಕರ್ ತಿಳಿಸಿದ್ದಾರೆ.
ಹಿಂದೂ ವಿವಾಹ ಕಾಯ್ದೆ (ಎಚ್ಎಂಎ)ಯ ಸೆಕ್ಷನ್ 25ರಡಿಜೀವನಾಂಶವನ್ನು ನೀಡುವ ವಿಚಾರದಲ್ಲಿ ನ್ಯಾಯಾಂಗ ವಿವೇಚನೆಯಡಿ ಅರ್ಜಿದಾರಳು(ನು) ಆರ್ಥಿಕವಾಗಿ ಸ್ವಾವಲಂಭಿಯಾಗಿದ್ದರೆ ಹಾಗೂ ಸ್ವತಂತ್ರಳಾಗಿದ್ದರೆ ಬಳಸಲಾಗುವುದಿಲ್ಲ. ಅಲ್ಲದೆ ಆ ವಿವೇಚನೆಯನ್ನು ಸಂಬಂಧಪಟ್ಟ ದಾಖಲೆಗಳು, ಪ್ರತಿವಾದಿಯ ಆರ್ಥಿಕ ಸಾಮರ್ಥ್ಯಗಳು ಹಾಗೂ ಮೇಲ್ಮನವಿ ಅರ್ಜಿದಾರರ ಆರ್ಥಿಕ ದುರ್ಬಲತೆಯನ್ನು ಪ್ರದರ್ಶಿಸುವ ಯಾವುದೇ ಆಧಾರಗಳ ಅನುಪಸ್ಥಿತಿ ಸಂದರ್ಭ ಸೂಕ್ತವಾಗಿ ಮತ್ತು ವಿವೇಚನೆಯಿಂದ ಬಳಸಬೇಕು ಎಂದು ದಿಲ್ಲಿ ಹೈಕೋರ್ಟ್ ಅಭಿಪ್ರಾಯಪಟ್ಟಿರುವುದಾಗಿ barandbench ವರದಿ ಮಾಡಿದೆ.
ಪತ್ನಿಯು ಕ್ರೂರವಾಗಿ ನಡೆಸಿಕೊಂಡಿದ್ದಾಳೆಂಬ ಆರೋಪದಲ್ಲಿ ಪತಿಗೆ ವಿಚ್ಛೇದನಕ್ಕೆ ಅವಕಾಶ ನೀಡಿದ ನ್ಯಾಯಾಲಯವು, ಆಕೆಗೆ ಜೀವನಾಂಶ ನಿರಾಕರಿಸಿದ ಕುಟುಂಬ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದ ಸಂದರ್ಭ ದಿಲ್ಲಿ ಹೈಕೋರ್ಟ್ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪತಿಯು ನ್ಯಾಯವಾದಿಯಾಗಿದ್ದು, ಆತನ ಪತ್ನಿ ಭಾರತೀಯ ರೈಲು ಸಂಚಾರ ಸೇವೆ (ಐಆರ್ಟಿಎಸ್) ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಈಕೆ ಬೇರೊಂದು ಮದುವೆಯಾಗಿ, ವಿವಾಹವಾಗಿದ್ದರು. ಆದರೆ ವಿವಾಹವಾದ 14 ತಿಂಗಳೊಳಗೆ ಪ್ರತ್ಯೇಕಗೊಂಡಿದ್ದರು.
ಪತ್ನಿಯು ತನ್ನ ಮೇಲೆ ಮಾನಸಿಕ ಹಾಗೂ ದೈಹಿಕ ಕ್ರೌರ್ಯವನ್ನು ಎಸಗುತ್ತಿದ್ದಳು.ಅವಾಚ್ಯ ಭಾಷೆ ಬಳಕೆ ಸೇರಿದಂತೆ ಅಪಮಾನಕಾರಿ ಟೆಕ್ಸ್ಟ್ ಸಂದೇಶಗಳನ್ನು ಕಳುಹಿಸುತ್ತಿದ್ದಳು. ಲೈಂಗಿಕ ಸಂಪರ್ಕವನ್ನು ನಿರಾಕರಿಸುತ್ತಿದ್ದಳು ಹಾಗೂ ವೃತ್ತಿಪರ ಮತ್ತು ಸಾಮಾಜಿಕ ವರ್ತುಲಗಳಲ್ಲಿ ಅವಮಾನಿಸುತ್ತಿದ್ದಳು. ಆದರೆ ಮಹಿಳೆಯು ಈ ಆರೋಪಗಳನ್ನು ನಿರಾಕರಿಸಿದ್ದಳು . ಬದಲಿಗೆ ಪತಿಯೇ ತನ್ನ ಮೇಲೆ ಕ್ರೌರ್ಯವನ್ನು ಎಸಗುತ್ತಿದ್ದನೆಂದು ಆಪಾದಿಸಿದ್ದಳು.
ಪ್ರಕರಣದ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯವು ವಿವಾಹವನ್ನು ರದ್ದುಪಡಿಸಿತ್ತು ಹಾಗೂ ವಿಚ್ಛೇದನೆ ನೀಡಬೇಕಾದರೆ ತನಗೆ 50 ಲಕ್ಷ ರೂ. ನೀಡುವಂತೆ ಆಗ್ರಹಿಸಿರುವುದನ್ನು ಅದು ಗಮನಕ್ಕೆ ತೆಗೆದುಕೊಂಡಿತ್ತು.
ಕೌಟುಂಬಿಕ ನ್ಯಾಯಾಲಯದ ತೀರ್ಪಿನಲ್ಲಿ ಮಧ್ಯಪ್ರವೇಶಿಸುವುದಕ್ಕೆ ಯಾವುದೇ ಕಾರಣವಿಲ್ಲವೆಂದು ತನಗೆ ಮನವರಿಕೆಯಾಗಿದೆಯೆಂದ ಬಾಂಬೆ ಹೈಕೋರ್ಟ್ತಿಳಿಸಿತು.