×
Ad

“ಉಳಿದವರೆಲ್ಲರನ್ನೂ ವಂಚಕರು ಎಂದು ಹೇಗೆ ಕರೆಯುತ್ತೀರಿ?”: ಪತಂಜಲಿಯ ಚ್ಯವನ್‌ಪ್ರಾಶ್ ಜಾಹೀರಾತಿಗೆ ದಿಲ್ಲಿ ಹೈಕೋರ್ಟ್ ಆಕ್ರೋಶ

Update: 2025-11-06 16:58 IST

ದಿಲ್ಲಿ ಹೈಕೋರ್ಟ್‌ (Photo: PTI)

ಹೊಸದಿಲ್ಲಿ: ಪತಂಜಲಿ ಆಯುರ್ವೇದದ ಹೊಸ ಚ್ಯವನ್‌ ಪ್ರಾಶ್ ಜಾಹೀರಾತು ವಿವಾದದ ಸ್ವರೂಪ ಪಡೆದಿದೆ. ಇತರ ಬ್ರ್ಯಾಂಡ್‌ಗಳ ಚ್ಯವನ್‌ ಪ್ರಾಶ್‌ ಗಳನ್ನು “ಧೋಕಾ” (ವಂಚನೆ) ಎಂದು ಕರೆಯುವ ಮೂಲಕ ಗ್ರಾಹಕರನ್ನು ತಪ್ಪುಮಾರ್ಗಕ್ಕೆ ದೂಡಲಾಗುತ್ತಿದೆ ಎಂದು ಆರೋಪಿಸಿ, ಡಾಬರ್ ಇಂಡಿಯಾ ದಿಲ್ಲಿ ಹೈಕೋರ್ಟ್‌ನಲ್ಲಿ ತಾತ್ಕಾಲಿಕ ತಡೆಯಾಜ್ಞೆ ಕೋರಿ ಮೊಕದ್ದಮೆ ಹೂಡಿದೆ.

ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ತೇಜಸ್ ಕರಿಯಾ ಅವರು ಪತಂಜಲಿಯ ವಾದವನ್ನು ತಿರಸ್ಕರಿಸಿ, “ನೀವು ನಿಮ್ಮ ಚ್ಯವನ್‌ ಪ್ರಾಶ್ ಅತ್ಯುತ್ತಮ ಎಂದು ಹೇಳಬಹುದು. ಆದರೆ ಇತರ ಕಂಪೆನಿಗಳ ಉತ್ಪನ್ನಗಳನ್ನು ‘ವಂಚನೆ’ ಎಂದು ಕರೆಯಲು ಸಾಧ್ಯವಿಲ್ಲ. ‘ಕೀಳು ಗುಣಮಟ್ಟದ’ ಎಂದು ಹೇಳುವುದು ಬೇರೆ, ಆದರೆ ‘ಧೋಕಾ’ ಎನ್ನುವುದು ಅವಹೇಳನಕಾರಿ ಪದ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತಂಜಲಿ ಪರವಾಗಿ ಹಿರಿಯ ವಕೀಲ ರಾಜೀವ್ ನಾಯರ್ ವಾದ ಮಂಡಿಸಿ, “ಈ ಜಾಹೀರಾತು ಕೇವಲ ಅತಿಶಯೋಕ್ತಿ. ‘ನಾನು ಉತ್ತಮ’ ಎಂದು ಹೇಳುವುದು ಜಾಹೀರಾತಿನ ಸ್ವಭಾವ. ಯಾರನ್ನೂ ನೇರವಾಗಿ ಗುರಿಯಾಗಿಸಲಾಗಿಲ್ಲ. ಡಾಬರ್ ಅತಿಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತಿದೆ,” ಎಂದು ಹೇಳಿದರು.

ಆದರೆ ಡಾಬರ್ ಪರವಾಗಿ ಹಿರಿಯ ವಕೀಲ ಸಂದೀಪ್ ಸೇಥಿ ತೀವ್ರವಾಗಿ ಪ್ರತಿರೋಧ ವ್ಯಕ್ತಪಡಿಸಿ, “ಪತಂಜಲಿ ಸಂಪೂರ್ಣ ಚ್ಯವನ್‌ ಪ್ರಾಶ್ ಉತ್ಪನ್ನಗಳ ವರ್ಗವನ್ನೇ ‘ಧೋಕಾ’ ಎಂದು ಚಿತ್ರಿಸಿದೆ. ಇದು ನೇರ ಅವಹೇಳನ. ಬಾಬಾ ರಾಮದೇವ್ ಅವರಂಥ ಯೋಗಗುರುವಿನಿಂದ ಬರುವ ಈ ರೀತಿಯ ಹೇಳಿಕೆ ಗ್ರಾಹಕರಲ್ಲಿ ತಪ್ಪು ನಂಬಿಕೆ ಹುಟ್ಟಿಸುತ್ತದೆ. ಇದು ನಿಷೇಧಕ್ಕೆ ಅರ್ಹ,” ಎಂದು ವಾದಿಸಿದರು.

“ನಮ್ಮ ಡಾಬರ್ ಚ್ಯವನ್‌ ಪ್ರಾಶ್ ಶಾಸ್ತ್ರೋಕ್ತ ಆಯುರ್ವೇದ ವಿಧಾನದಲ್ಲಿ ತಯಾರಾಗುತ್ತದೆ. 1949ರಿಂದ ಮಾರುಕಟ್ಟೆಯಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. 61% ಮಾರುಕಟ್ಟೆ ಪಾಲು ಹೊಂದಿದ್ದೇವೆ. ಪತಂಜಲಿಯ ಈ ಹೇಳಿಕೆ ಗ್ರಾಹಕರಲ್ಲಿ ಭಯ ಮತ್ತು ಗೊಂದಲ ಹುಟ್ಟಿಸುವ ಉದ್ದೇಶ ಹೊಂದಿದೆ,” ಎಂದು ಅವರು ಕಳವಳ ವ್ಯಕ್ತಪಡಿಸಿದರು.

ವಾದ ಆಲಿಸಿದ ನಂತರ, ನ್ಯಾಯಮೂರ್ತಿ ತೇಜಸ್ ಕರಿಯಾ ತೀರ್ಪನ್ನು ಕಾಯ್ದಿರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News