×
Ad

ಸ್ಮೃತಿ ಇರಾನಿಯ ಶೈಕ್ಷಣಿಕ ದಾಖಲೆಗಳನ್ನು ಬಹಿರಂಗಗೊಳಿಸುವಂತೆ ಕೇಂದ್ರ ಮಾಹಿತಿ ಆಯೋಗ ನೀಡಿದ್ದ ಆದೇಶವನ್ನು ಬದಿಗಿರಿಸಿದ ದಿಲ್ಲಿ ಹೈಕೋರ್ಟ್

Update: 2025-08-25 21:53 IST

Photo | PTI

ಹೊಸದಿಲ್ಲಿ: ಬಿಜೆಪಿ ನಾಯಕಿ ಹಾಗೂ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯ ಹತ್ತು ಮತ್ತು ಹನ್ನೆರಡನೆ ತರಗತಿಯ ಶೈಕ್ಷಣಿಕ ದಾಖಲೆಗಳನ್ನು ಒದಗಿಸುವಂತೆ ಸಿಬಿಎಸ್ಇಗೆ ಕೇಂದ್ರ ಮಾಹಿತಿ ಆಯೋಗ ನೀಡಿದ್ದ ಆದೇಶವನ್ನು ಸೋಮವಾರ ದಿಲ್ಲಿ ಹೈಕೋರ್ಟ್ ಬದಿಗಿರಿಸಿದೆ.

ಸಾರ್ವಜನಿಕ ಹುದ್ದೆಗಳನ್ನು ಹೊಂದಲು ಹಾಗೂ ಅಧಿಕೃತ ಹೊಣೆಗಾರಿಕೆಗಳನ್ನು ನಿಭಾಯಿಸಲು ಸ್ಮೃತಿ ಇರಾನಿ ಅವರಿಗೆ ಶೈಕ್ಷಣಿಕ ಅರ್ಹತೆಯ ಶಾಸನಾತ್ಮಕ ಅಗತ್ಯತೆಯಲ್ಲ ಎಂದು ನ್ಯಾ. ಸಚಿನ್ ದತ್ತಾ ಅಭಿಪ್ರಾಯ ಪಟ್ಟಿದ್ದಾರೆ.

ಇದಕ್ಕೂ ಮುನ್ನ, ಜನವರಿ 17, 2017ರಂದು “ಸ್ಮೃತಿ ಇರಾನಿಯವರ ಪ್ರಸ್ತುತ ಶೈಕ್ಷಣಿಕ ದಾಖಲಾತಿಗಳನ್ನು ಪರಿಶೀಲಿಸಲು ಹಾಗೂ ಮೇಲ್ಮನವಿದಾರರು ಬಯಸಿದ ದಾಖಲೆಗಳ ಪ್ರಮಾಣೀಕೃತ ದಾಖಲೆಗಳನ್ನು ಪ್ರವೇಶ ಪತ್ರ ಹಾಗೂ ಅಂಕಪಟ್ಟಿಯನ್ನು ಹೊರತುಪಡಿಸಿ ಯಾವುದೇ ವೆಚ್ಚವಿಲ್ಲದೆ ಒದಗಿಸಬೇಕು ಎಂದು ಕೇಂದ್ರ ಮಾಹಿತಿ ಆಯೋಗ ನೀಡಿದ್ದ ಆದೇಶವನ್ನು ಪ್ರಶ್ನಿತಸಿ ಸಿಬಿಎಸ್ಇ ಸಲ್ಲಿಸಿದ್ದ ಮೇಲ್ಮನವಿಯನ್ನು ದಿಲ್ಲಿ ಹೈಕೋರ್ಟ್ ವಿಚಾರಣೆಗೆ ಅಂಗೀಕರಿಸಿತ್ತು.

ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ. ಸಚಿನ್ ದತ್ತಾ, ಕೇಂದ್ರ ಮಾಹಿತಿ ಆಯೋಗ ನೀಡಿರುವ ಆದೇಶವು ಕಾನೂನು ಬಾಹಿರ ಅಥವಾ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿ ಮೀರಿದ್ದಾಗಿದೆ ಎಂದು ತೀರ್ಪು ನೀಡಿದ್ದಾರೆ.

ಇದಕ್ಕೂ ಮುನ್ನ, ನರೇಂದ್ರ ಮೋದಿಯವರ ಪದವಿಯ ಕುರಿತೂ ನ್ಯಾ. ಸಚಿನ್ ದತ್ತಾ ಅವರು 175 ಪುಟಗಳ ತೀರ್ಪು ನೀಡಿದ್ದರು. ಆ ತೀರ್ಪಿನಲ್ಲೂ ಪ್ರಧಾನಿ ಮೋದಿಯ ಪದವಿಯ ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸಬೇಕಾದ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News