×
Ad

ಹುಟ್ಟುಹಬ್ಬದ ಉಡುಗೊರೆ ವಿಚಾರದಲ್ಲಿ ಜಗಳ: ಪತ್ನಿ, ಅತ್ತೆಯನ್ನು ಹತ್ಯೆಗೈದ ವ್ಯಕ್ತಿ!

Update: 2025-08-31 12:12 IST

ಕುಸುಮ್ ಸಿನ್ಹಾ ಹಾಗೂ ಅವರ ಪುತ್ರಿ ಪ್ರಿಯಾ ಸೆಹ್ಗಲ್ (Photo credit: NDTV)

ಹೊಸದಿಲ್ಲಿ: ಶನಿವಾರ ದಿಲ್ಲಿಯ ರೋಹಿಣಿಯಲ್ಲಿ ತನ್ನ ಪುತ್ರನ ಹುಟ್ಟುಹಬ್ಬದ ಉಡುಗೊರೆ ವಿನಿಮಯ ವಿಚಾರಕ್ಕೆ ನಡೆದ ಜಗಳದಲ್ಲಿ ತನ್ನ ಪತ್ನಿ ಹಾಗೂ ಅತ್ತೆಯನ್ನು ಹತ್ಯೆಗೈದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಮಧ್ಯಾಹ್ನ 3.50ರ ವೇಳೆಗೆ ತನ್ನ ತಾಯಿ ಹಾಗೂ ಸಹೋದರಿಯನ್ನು ಹತ್ಯೆಗೈಯ್ಯಲಾಗಿದೆ ಎಂದು ವ್ಯಕ್ತಿಯೊಬ್ಬರು ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಡಿದ ದೂರವಾಣಿ ಕರೆಯನ್ನು ಆಧರಿಸಿ ಸ್ಥಳಕ್ಕೆ ಧಾವಿಸಿದ ಕೆಎನ್ಕೆ ಮಾರ್ಗ್ ಠಾಣೆಯ ಪೊಲೀಸರಿಗೆ ಕುಸುಮ್ ಸಿನ್ಹಾ (63) ಹಾಗೂ ಅವರ ಪುತ್ರಿ ಪ್ರಿಯಾ ಸೆಹ್ಗಲ್ (34) ಎಂಬವರು ಕೊಠಡಿಯೊಂದರಲ್ಲಿ ಮೃತ ಸ್ಥಿತಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ.

ನನ್ನ ತಾಯಿಯು ಆಗಸ್ಟ್ 28ರಂದು ತಮ್ಮ ಮೊಮ್ಮಗ ಚಿರಾಗ್ ನ ಹುಟ್ಟುಹಬ್ಬವನ್ನು ಆಚರಿಸಲು ಪ್ರಿಯಾಳ ನಿವಾಸಕ್ಕೆ ತೆರಳಿದ್ದರು ಎಂದು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದ ಮೃತ ಕುಸುಮ್ ಸಿನ್ಹಾರ ಪುತ್ರ ಮೇಘ್ ಸಿನ್ಹಾ (30) ಮಾಹಿತಿ ನೀಡಿದರು ಎಂದು ಪೊಲೀಸರು ಹೇಳಿದ್ದಾರೆ.

ಹುಟ್ಟುಹಬ್ಬದ ಸಮಾರಂಭದ ವೇಳೆ ಉಡುಗೊರೆಗೆ ಸಂಬಂಧಿಸಿದಂತೆ ಪ್ರಿಯಾ ಹಾಗೂ ಆಕೆಯ ಪತಿ ಯೋಗೇಶ್ ನಡುವೆ ಜಗಳ ನಡೆದಿದ್ದು, ಆ ಜಗಳ ಪರಿಹರಿಸಲು ಕುಸುಮ್, ಪ್ರಿಯಾರ ಮನೆಯಲ್ಲೇ ಉಳಿದುಕೊಂಡಿದ್ದರು ಎಂದು ಮೇಘ್ ಸಿನ್ಹಾ ತಿಳಿಸಿದ್ದಾರೆ.

“ದೂರು ನೀಡಿದ ವ್ಯಕ್ತಿಯು ಆಗಸ್ಟ್ 30ರಂದು ತನ್ನ ತಾಯಿಯನ್ನು ದೂರವಾಣಿ ಕರೆ ಮೂಲಕ ಸಂಪರ್ಕಿಸಲು ಯತ್ನಿಸಿದಾಗ, ಅಲ್ಲಿಂದ ಯಾವುದೇ ಉತ್ತರ ದೊರೆತಿಲ್ಲ. ಆಗ ಆತ ಪ್ರಿಯಾ ಅವರ ನಿವಾಸದ ಬಳಿಗೆ ಬಂದಿದ್ದು, ಮನೆಯ ಬಾಗಿಲಿನ ಚಿಲಕ ಹೊರಗಿನಿಂದ ಹಾಕಿರುವುದು ಕಂಡು ಬಂದಿದೆ. ಬಾಗಿಲ ಬಳಿಯೇ ರಕ್ತದ ಕಲೆಗಳೂ ಪತ್ತೆಯಾಗಿವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆತ ಕೂಡಲೇ ತನ್ನ ಕುಟುಂಬದ ಇತರ ಸದಸ್ಯರಿಗೆ ಈ ಕುರಿತು ಮಾಹಿತಿ ನೀಡಿದ್ದು, ಅವರೊಂದಿಗೆ ಮನೆಯ ಬಾಗಿಲನ್ನು ಒಡೆದಿದ್ದಾರೆ. ಮನೆಯ ಬಾಗಿಲು ತೆರೆದಾಗ, ತನ್ನ ತಾಯಿ ಹಾಗೂ ಸಹೋದರಿ ಕೊಠಡಿಯೊಂದರಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಅವರಿಬ್ಬರನ್ನೂ ತನ್ನ ಸಹೋದರಿ ಪ್ರಿಯಾಳ ಪತಿಯೇ ಹತ್ಯೆಗೈದಿದ್ದು, ಬಳಿಕ, ಆತ ಮಕ್ಕಳೊಂದಿಗೆ ಪರಾರಿಯಾಗಿದ್ದಾನೆ ಎಂದು ಮೇಘ್ ಸಿನ್ಹಾ ದೂರು ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದರ ಬೆನ್ನಿಗೇ, ಯೋಗೇಶ್ ನನ್ನು ಬಂಧಿಸಿರುವ ಕೆಎನ್ಕೆ ಮಾರ್ಗ್ ಪೊಲೀಸರು, ಘಟನಾ ಸ್ಥಳದಿಂದ ರಕ್ತದ ಕಲೆಯಿರುವ ಬಟ್ಟೆಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಜೊತೆ ಕತ್ತರಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಕೃತ್ಯಕ್ಕೆ ಕೌಟುಂಬಿಕ ಕಲಹ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News