×
Ad

ಮನೋವಿಜ್ಞಾನ ಪಠ್ಯಕ್ರಮದಿಂದ ಕಾಶ್ಮೀರ, ಫೆಲೆಸ್ತೀನ್ ವಿಷಯಗಳನ್ನು ಕೈಬಿಟ್ಟ ದಿಲ್ಲಿ ವಿವಿ

Update: 2025-05-03 16:55 IST

PC : www.du.ac.in

ಹೊಸದಿಲ್ಲಿ: ಶುಕ್ರವಾರ ನಡೆದ ದಿಲ್ಲಿ ವಿವಿಯ ಶೈಕ್ಷಣಿಕ ವಿಷಯಗಳ ಕುರಿತು ಸ್ಥಾಯಿ ಸಮಿತಿಯ ಸಭೆಯಲ್ಲಿ ಇಸ್ರೇಲ್-ಫೆಲೆಸ್ತೀನ್ ಸಂಘರ್ಷ, ಕಾಶ್ಮೀರ ಸಮಸ್ಯೆ ಮತ್ತು ಡೇಟಿಂಗ್ ಆ್ಯಪ್‌ಗಳಿಗೆ ಸಂಬಂಧಿಸಿದ ಆತ್ಮಹತ್ಯೆಗಳು ಸೇರಿದಂತೆ ಹಲವಾರು ಪ್ರಮುಖ ವಿಷಯಗಳನ್ನು ಮನೋವಿಜ್ಞಾನ ಪಠ್ಯಕ್ರಮದ ಪ್ರಸ್ತಾವದಿಂದ ಕೈಬಿಡಲಾಗಿದೆ ಎಂದು ಹೇಳಲಾಗಿದೆ.

ಪಾಶ್ಚಿಮಾತ್ಯ ಚಿಂತನೆಯ ‘ಅತಿಯಾದ ಪ್ರಾತಿನಿಧ್ಯ’ವನ್ನು ಆಕ್ಷೇಪಿಸಿದ ಸಮಿತಿಯ ಅಧ್ಯಕ್ಷ ಪ್ರೊ.ಶ್ರೀಪ್ರಕಾಶ ಸಿಂಗ್ ಅವರು ‘ಶಾಂತಿಯ ಮನೋವಿಜ್ಞಾನ’ದ ನಾಲ್ಕನೇ ಘಟಕವನ್ನು ಬದಲಿಸುವಂತೆ ಒತ್ತಾಯಿಸಿದರು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಬೋಧಕ ವೃಂದದ ಸದಸ್ಯರು ತಿಳಿಸಿದರು.

ಮನೋವಿಜ್ಞಾನ ಪಠ್ಯಕ್ರಮವು ಇಸ್ರೇಲ್-ಫೆಲೆಸ್ತೀನ್, ಕಾಶ್ಮೀರ ಸಂಘರ್ಷಗಳೊಂದಿಗೆ ಮಹಾಭಾರತ ಮತ್ತು ಭಗವದ್ಗೀತೆಯಂತಹ ಭಾರತೀಯ ಮಹಾಕಾವ್ಯಗಳನ್ನೂ ಒಳಗೊಂಡಿತ್ತು.

ಪ್ರಾಧ್ಯಾಪಕರ ಹೇಳಿಕೆಯಂತೆ ‘ಕಾಶ್ಮೀರ ಸಮಸ್ಯೆಯು ಬಗೆಹರಿದಿದೆ ಮತ್ತು ನಾವು ಇಸ್ರೇಲ್-ಫೆಲೆಸ್ತೀನ್ ಅನ್ನು ಬೋಧಿಸುವ ಅಗತ್ಯವಿಲ್ಲ ’ ಎಂದು ಪ್ರೊ.ಸಿಂಗ್ ಸಭೆಯಲ್ಲಿ ಹೇಳಿದ್ದರು.

ಡಿಜಿಟಲ್ ಮಾಧ್ಯಮ ವಿಭಾಗದಡಿ ಡೇಟಿಂಗ್ ಆ್ಯಪ್‌ಗಳ ಮನೋವಿಜ್ಞಾನವನ್ನು ಸೇರಿಸುವ ಇನ್ನೊಂದು ಪ್ರಸ್ತಾವವನ್ನು ಸಭೆಯಲ್ಲಿ ತಿರಸ್ಕರಿಸಿದ ಪ್ರೊ.ಸಿಂಗ್,‘ನಮ್ಮ ಭಾರತೀಯ ಕುಟುಂಬ ವ್ಯವಸ್ಥೆಯು ಸದೃಢವಾಗಿದೆ ಮತ್ತು ಪಾಶ್ಚಿಮಾತ್ಯ ಪರಿಕಲ್ಪನೆಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿಲ್ಲ ’ ಎಂದು ವಾದಿಸಿದರು. ಡೇಟಿಂಗ್ ಆ್ಯಪ್‌ಗಳ ದುರುಪಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಆತ್ಮಹತ್ಯೆಗಳ ಹಿನ್ನೆಲೆಯಲ್ಲಿ ಈ ಆ್ಯಪ್‌ಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಉರ್ಮಿ ನಂದಾ ಬಿಸ್ವಾಸ್ ವಾದಕ್ಕೆ ಪ್ರೊ.ಸಿಂಗ್ ಸೊಪ್ಪು ಹಾಕಲಿಲ್ಲ ಎನ್ನಲಾಗಿದೆ.

ಅಲ್ಪಸಂಖ್ಯಾತ ಒತ್ತಡ ಸಿದ್ಧಾಂತ ಮತ್ತು ವೈವಿಧ್ಯತೆಯ ಮನೋವಿಜ್ಞಾನ ಸೇರಿದಂತೆ ಇತರ ವಿಷಯಗಳಿಗೂ ಆಕ್ಷೇಪ ವ್ಯಕ್ತವಾಗಿತ್ತು. ಸಮಿತಿಯ ಕೆಲವು ಸದಸ್ಯರು ಭಾರತೀಯ ಸಮಾಜದಲ್ಲಿ ಜಾತಿ ತಾರತಮ್ಯ,ಸ್ತ್ರೀದ್ವೇಷ ಮತ್ತು ಪೂರ್ವಾಗ್ರಹದ ಬಗ್ಗೆ ಬೋಧನೆಯ ಮಹತ್ವವನ್ನು ಒತ್ತಿ ಹೇಳಿದ್ದರೂ ಸಮಿತಿಯ ಅಧ್ಯಕ್ಷರು ಅವೆಲ್ಲ ಅತಿಯಾದ ನಕಾರಾತ್ಮಕ ವಿಷಯಗಳೆಂದು ಹೇಳಿ ತಿರಸ್ಕರಿಸಿದರು ಎನ್ನಲಾಗಿದೆ.

ವಿಭಾಗದ ಸ್ವಾಯತ್ತತೆಯನ್ನು ಕಡೆಗಣಿಸುತ್ತಿರುವಂತೆ ಕಂಡು ಬರುತ್ತಿದ್ದು,ಇದು ಕಳವಳಕಾರಿಯಾಗಿದೆ. ಸಮಿತಿಯ ಅಧ್ಯಕ್ಷರ ಕ್ರಮಗಳು ರಾಜಕೀಯ ಪ್ರೇರಿತವಾಗಿರುವಂತಿದ್ದು,ಶೈಕ್ಷಣಿಕ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಅನಗತ್ಯ ಹಸ್ತಕ್ಷೇಪವನ್ನು ಸೂಚಿಸುತ್ತಿವೆ ಎಂದು ಶೈಕ್ಷಣಿಕ ಮಂಡಳಿ ಮತ್ತು ಸ್ಥಾಯಿ ಸಮಿತಿಯ ಸದಸ್ಯೆ ಡಾ.ಮೋನಮಿ ಸಿನ್ಹಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News