×
Ad

ರಜೆ ನಿರಾಕರಿಸಿದ್ದಕ್ಕೆ ನಾಲ್ವರು ಸಹೋದ್ಯೋಗಿಗಳಿಗೆ ಚೂರಿಯಿಂದ ಇರಿದ ಸರಕಾರಿ ನೌಕರ : ಇಬ್ಬರ ಸ್ಥಿತಿ ಗಂಭೀರ

Update: 2025-02-07 10:38 IST

Photo credit: madhyamamonline.com

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸರ್ಕಾರಿ ಉದ್ಯೋಗಿಯೋರ್ವ ರಜೆ ನಿರಾಕರಿಸಿದ್ದಕ್ಕೆ ನಾಲ್ವರು ಸಹೋದ್ಯೋಗಿಗಳಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡವರನ್ನು ಜಯದೇಬ್ ಚಕ್ರವರ್ತಿ, ಸಂತುನು ಸಹಾ, ಸಾರ್ಥ ಮತ್ತು ಶೇಖ್ ಸತಾಬುಲ್ ಎಂದು ಗುರುತಿಸಲಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಆರೋಪಿಯನ್ನು ಅಮಿತ್ ಕುಮಾರ್ ಸರ್ಕಾರ್ ಎಂದು ಗುರುತಿಸಲಾಗಿದ್ದು, ಕೋಲ್ಕತ್ತಾದ ನ್ಯೂಟೌನ್ ಪ್ರದೇಶದ ಕರಿಗರಿ ಭವನದ ತಾಂತ್ರಿಕ ಶಿಕ್ಷಣ ವಿಭಾಗದಲ್ಲಿ ಈತ ಕೆಲಸ ಮಾಡುತ್ತಿದ್ದ. ಸರ್ಕಾರ್ ತನ್ನ ಸಹೋದ್ಯೋಗಿಗಳಿಗೆ ಚೂರಿಯಿಂದ ಇರಿದು ಬಳಿಕ ಅದೇ ಚೂರಿಯೊಂದಿಗೆ ನಗರದಾದ್ಯಂತ ನಡೆದಾಡಿದ್ದಾನೆ. ಈ ಕುರಿತ ವೀಡಿಯೊ ಕೂಡ ವೈರಲ್ ಆಗಿದೆ.

ಅಮಿತ್ ಕುಮಾರ್ ಸರ್ಕಾರ್ ಬೆನ್ನಿನ ಮೇಲೆ ಒಂದು ಚೀಲ, ಎಡಗೈಯ್ಯಲ್ಲಿ ಮತ್ತೊಂದು ಕೈ ಚೀಲ ಹಿಡಿದುಕೊಂಡಿದ್ದು, ಬಲಗೈಯ್ಯಲ್ಲಿ ರಕ್ತ ಸಿಕ್ತವಾದ ಚೂರಿಯನ್ನು ಹಿಡಿದುಕೊಂಡು ಸಾರ್ವಜನಿಕ ರಸ್ತೆಯಲ್ಲಿ ನಡೆದಾಡಿದ್ದಾನೆ. ಕೆಲವು ದಾರಿಹೋಕರು ಈ ವೇಳೆ ವೀಡಿಯೊ ಚಿತ್ರೀಕರಿಸಿದ್ದಾರೆ. ಈ ವೇಳೆ ತನ್ನ ಬಳಿಗೆ ಬರದಂತೆ ಆರೋಪಿಯು ದಾರಿಹೋಕರಿಗೆ ಬೆದರಿಸುವುದು ಕಂಡು ಬಂದಿದೆ.

ʼಉತ್ತರ 24 ಪರಗಣ ಜಿಲ್ಲೆಯ ಸೋದೆಪುರದ ಘೋಲಾ ನಿವಾಸಿಯಾದ ಅಮಿತ್ ಕುಮಾರ್ ಸರ್ಕಾರ್ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ. ರಜೆ ಕೊಟ್ಟಿಲ್ಲ ಎಂದು ಸಹೋದ್ಯೋಗಿಗಳೊಂದಿಗೆ ಜಗಳವಾಡಿ ಬಳಿಕ ಚೂರಿಯಿಂದ ಹಲ್ಲೆ ನಡೆಸಿ ಪರಾರಿಯಾಗಲು ಪ್ರಯತ್ನಿಸಿದ್ದಾನೆʼ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News