ಆಂಧ್ರ ಪ್ರದೇಶ | ದುರಂತವಾಗಿ ಮಾರ್ಪಟ್ಟ ಬನ್ನಿ ಹಬ್ಬ : ಸಾಂಪ್ರದಾಯಿಕ ದೊಣ್ಣೆ ಕಾಳಗದಲ್ಲಿ ನಾಲ್ವರು ಮೃತ್ಯು,100ಕ್ಕೂ ಅಧಿಕ ಜನರಿಗೆ ಗಾಯ
Photo Credit : newindianexpress.com
ಕರ್ನೂಲು,ಅ.3: ಕರ್ನೂಲು ಜಿಲ್ಲೆಯ ಹೊಳಗುಂದ ಮಂಡಲದ ದೇವರಗಟ್ಟು ಬೆಟ್ಟದಲ್ಲಿ ಗುರುವಾರ ರಾತ್ರಿ ಸಾಂಪ್ರದಾಯಿಕವಾಗಿ ನಡೆದ ದೊಣ್ಣೆ ಕಾಳಗದಲ್ಲಿ ನಾಲ್ವರು ಭಕ್ತರು ಮೃತಪಟ್ಟಿದ್ದು, ನೂರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಇದರೊಂದಿಗೆ ಸ್ಥಳೀಯವಾಗಿ ‘ಕರ‌್ರಲ ಸಮರಂ’ ಎಂದು ಕರೆಯಲಾಗುವ ವಾರ್ಷಿಕ ಬನ್ನಿ ಹಬ್ಬವು ದುರಂತದಲ್ಲಿ ಪರ್ಯವಸಾನಗೊಂಡಿದೆ.
ಶತಮಾನಗಳಷ್ಟು ಹಳೆಯದಾದ ಈ ಆಚರಣೆಗಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣಗಳಿಂದ ಸುಮಾರು ಮೂರು ಲಕ್ಷ ಭಕ್ತರು ಶ್ರೀ ಮಾಳ ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ್ದರು. ಭೈರವನ ರೂಪದಲ್ಲಿ ಶಿವನಿಂದ ಮಣಿ ಮತ್ತು ಮಲ್ಲಾಸುರ ಎಂಬ ರಾಕ್ಷಸರ ಸಂಹಾರದ ಸಾಂಕೇತಿಕ ಮರುಸೃಷ್ಟಿಯಲ್ಲಿ ಸುಮಾರು 3,500 ಜನರು ದೊಣ್ಣೆಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದರು.
ಭಾರೀ ಜನದಟ್ಟಣೆಯಿಂದಾಗಿ ಸಂಭವಿಸಿದ ಕಾಲ್ತುಳಿತದಲ್ಲಿ ನಾಲ್ವರು ಮೃತಪಟ್ಟು, ನೂರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಏಳು ಜನರನ್ನು ಅದೋನಿ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಇತರರು ಆಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಈ ಆಚರಣೆಯಲ್ಲಿ ರಕ್ತ ಸುರಿಯುವ ಗಾಯಗಳನ್ನು ದೈವಿಕ ಆಶೀರ್ವಾದದ ಸಂಕೇತವೆಂದು ಭಕ್ತರು ನಂಬುತ್ತಾರೆ. ನೇರಣಿಕಿ, ಕೊತ್ತಪೇಟ ಮತ್ತು ಸಮೀಪದ ಹಳ್ಳಿಗಳ ಗ್ರಾಮಸ್ಥರು ಶಿವನ ಅನುಯಾಯಿಗಳನ್ನು ಪ್ರತಿನಿಧಿಸುತ್ತಾರೆ ಮತ್ತು ಎದುರಾಳಿ ಗುಂಪುಗಳು ರಾಕ್ಷಸರನ್ನು ಬಿಂಬಿಸುತ್ತವೆ. ಉಭಯ ಬಣಗಳ ನಡುವೆ ಭೀಷಣವಾದ, ಆದರೆ ವಿಧಿವತ್ತಾದ ಘರ್ಷಣೆಗಳು ನಡೆಯುತ್ತವೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಜಿ.ಶ್ರೀನಿವಾಸುಲು ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಪದೇ ಪದೇ ಪ್ರಾಣ ಹಾನಿಗಳು ಸಂಭವಿಸುತ್ತಿದ್ದರೂ ದೊಣ್ಣೆಗಳ ಕಾಳಗದಲ್ಲಿ ಪಾಲ್ಗೊಳ್ಳುವವರು ಅದನ್ನು ಪವಿತ್ರ ಸಂಪ್ರದಾಯ ಎಂದು ಪರಿಗಣಿಸುವುದರಿಂದ ಪೊಲೀಸ್ ದೂರುಗಳು ದಾಖಲಾಗುವುದಿಲ್ಲ. ಸುಮಾರು 800 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತಾದರೂ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದು ಭದ್ರತಾ ವ್ಯವಸ್ಥೆಗಳ ವೈಫಲ್ಯಕ್ಕೆ ಕಾರಣವಾಗಿತ್ತು.
ಈ ಅಪಾಯಕಾರಿ ಆಚರಣೆಯು ಪ್ರತಿ ವರ್ಷವೂ ಭಾರೀ ಸಂಖ್ಯೆಯಲ್ಲಿ ಜನರನ್ನು ಸೆಳೆಯುತ್ತಿದೆ. ಹೀಗಾಗಿ ಈ ಘಟನೆಯು ನಂಬಿಕೆ ಮತ್ತು ಸಾರ್ವಜನಿಕ ಸುರಕ್ಷತೆಯ ಸಮತೋಲನದ ಕುರಿತು ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದೆ.