ವಿಮಾನ ಪತನದ ಸ್ಥಳದಲ್ಲಿ ನಾಪತ್ತೆಯಾಗಿದ್ದ ಚಲನಚಿತ್ರ ನಿರ್ಮಾಪಕ ಮೃತಪಟ್ಟಿರುವುದು ಡಿಎನ್ಎ ಪರೀಕ್ಷೆಯಲ್ಲಿ ದೃಢ
ಮಹೇಶ್ ಕಲವಾಡಿಯಾ | PC : livemint.com
ಹೊಸದಿಲ್ಲಿ: ಏರ್ ಇಂಡಿಯಾ ವಿಮಾನ ದುರಂತದ ದಿನ ಅವಘಡ ನಡೆದ ಸ್ಥಳದಲ್ಲಿ ನಾಪತ್ತೆಯಾಗಿದ್ದ ಗುಜರಾತ್ ಚಲನಚಿತ್ರ ನಿರ್ಮಾಪಕ ಮಹೇಶ್ ಕಲವಾಡಿಯಾ ಅವರು ಮೃತಪಟ್ಟಿರುವುದು ದೃಢಪಟ್ಟಿದೆ.
ಜೂ.12 ರಂದು ನರೋಡಾ ನಿವಾಸಿ ಮಹೇಶ್ ಕಲಾವಾಡಿಯಾ ವಿಮಾನ ಪತನವಾದ ಸಮೀಪದ ಲಾ ಗಾರ್ಡನ್ ಪ್ರದೇಶದಲ್ಲಿ ವ್ಯಕ್ತಿಯೋರ್ವರನ್ನು ಭೇಟಿ ಆಗಲು ತೆರಳಿದ್ದ ವೇಳೆ ನಾಪತ್ತೆಯಾಗಿದ್ದರು. ಅವರ ಕೊನೆಯ ಮೊಬೈಲ್ ಲೊಕೇಶನ್ ವಿಮಾನ ದುರಂತ ಸ್ಥಳದಿಂದ 700 ಮೀಟರ್ ದೂರದಲ್ಲಿತ್ತು.
ಡಿಎನ್ಎ ಪರೀಕ್ಷೆಯಲ್ಲಿ ಅವರ ಕುಟುಂಬದ ಮಾದರಿಗಳೊಂದಿಗೆ ಹೊಂದಾಣಿಕೆಯಾದ ಹಿನ್ನೆಲೆ ಅವರು ಮೃತಪಟ್ಟಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ.
ವಿಮಾನ ಪತನದ ಬಳಿಕ ಮಹೇಶ್ ಕಲವಾಡಿಯಾ ಅವರಿಗೆ ಸೇರಿದ ಸ್ಕೂಟರ್ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸ್ಥಳದಲ್ಲಿ ಪತ್ತೆಯಾಗಿತ್ತು.
ಅವರ ಫೋನ್ ಸ್ಥಳದಲ್ಲಿ ಸ್ವಿಚ್ ಆಫ್ ಸ್ಥಿತಿಯಲ್ಲಿ ಕಂಡುಬಂದಿತ್ತು. ಇದು ದುರಂತದಲ್ಲಿ ಅವರು ಮೃತಪಟ್ಟಿರುವ ಬಗ್ಗೆ ಅನುಮಾನವನ್ನು ಬಲಗೊಳಿಸಿತ್ತು.
ಡಿಎನ್ಎ ಪರೀಕ್ಷಾ ಫಲಿತಾಂಶ ಮಹೇಶ್ ಅವರ ಸಾವನ್ನು ದೃಢಪಡಿಸಿದೆ. ಆರಂಭದಲ್ಲಿ, ಕುಟುಂಬವು ಅವರ ಮೃತದೇಹವನ್ನು ಸ್ವೀಕರಿಸಲು ನಿರಾಕರಿಸಿತ್ತು. ಅವರು ಬದುಕುಳಿದಿರಬಹುದು ಎಂಬ ಭರವಸೆಯನ್ನು ಇಟ್ಟುಕೊಂಡಿತ್ತು. ಡಿಎನ್ಎ ಸೇರಿದಂತೆ ಪ್ರಮುಖ ಪುರಾವೆಗಳನ್ನು ಪ್ರಸ್ತುತಪಡಿಸಿದ ನಂತರ ಅವರ ಕುಟುಂಬವು ಸತ್ಯವನ್ನು ಒಪ್ಪಿಕೊಂಡಿದೆ ಎಂದು ತಿಳಿದು ಬಂದಿದೆ.