ಗುರುತನ್ನು ಬಚ್ಚಿಟ್ಟುಕೊಂಡು ವ್ಯಾಪಾರ ಮಾಡುವುದು ತಪ್ಪು: ಕನ್ವರ್ ಯಾತ್ರೆ ಮಾರ್ಗಸೂಚಿಯ ಕುರಿತು ರಾಮದೇವ್ ಅಭಿಮತ
Photo Credit: PTI
ಹರಿದ್ವಾರ: ತಮ್ಮ ಗುರುತುಗಳನ್ನು ಬಚ್ಚಿಟ್ಟುಕೊಂಡು ವ್ಯಾಪಾರ ಮಾಡುವುದು ತಪ್ಪು ಎಂದು ರವಿವಾರ ಯೋಗ ಗುರು ಬಾಬಾ ಸ್ವಾಮಿ ರಾಮದೇವ್ ಅಭಿಪ್ರಾಯಪಟ್ಟಿದ್ದಾರೆ. ಕನ್ವರ್ ಯಾತ್ರೆ ಮಾರ್ಗದಲ್ಲಿ ಉಪಾಹಾರ ಗೃಹಗಳ ಮಾಲಕರು ತಮ್ಮ ಮಾಹಿತಿಗಳನ್ನು ಪ್ರದರ್ಶಿಸಬೇಕು ಎಂಬ ಉತ್ತರ ಪ್ರದೇಶ ಸರಕಾರದ ನಿರ್ದೇಶನವನ್ನು ಬೆಂಬಲಿಸಿ ಅವರು ಈ ಹೇಳಿಕೆ ನೀಡಿದ್ದಾರೆ.
ನಾನು ಹಿಂದೂ ಹಾಗೂ ಸನಾತನಿ ಎಂಬ ಬಗ್ಗೆ ನನಗೆ ಹೆಮ್ಮೆಯಿದೆ. ಅದೇ ರೀತಿ ಮುಸ್ಲಿಮರೂ ಕೂಡಾ ತಾವು ಮುಸ್ಲಿಮರು ಎಂಬ ಕುರಿತು ಹೆಮ್ಮೆ ಹೊಂದಿರಬೇಕು ಎಂದು ಸಲಹೆ ನೀಡಿರುವ ಬಾಬಾ ರಾಮದೇವ್, ಮುಸ್ಲಿಮರ ಪೂರ್ವಜರೂ ಕೂಡಾ ಹಿಂದೂಗಳಾಗಿದ್ದರು ಎಂದೂ ಪ್ರತಿಪಾದಿಸಿದ್ದಾರೆ.
ಯಾವ ಮಳಿಗೆಯಲ್ಲಿ ಆಹಾರ ಸೇವಿಸಬೇಕು ಎಂಬುದು ಗ್ರಾಹಕರಿಗೆ ಬಿಟ್ಟಿದ್ದು ಎಂದು ಹೇಳಿದ ಬಾಬಾ ರಾಮದೇವ್, “ಕನ್ವರ್ ಯಾತ್ರೆಯಲ್ಲಿ ಮುಸ್ಲಿಮರು ತಮ್ಮ ಗುರುತನ್ನು ಬಚ್ಚಿಟ್ಟುಕೊಂಡು ವ್ಯಾಪಾರ ಮಾಡಲು ಕಾರಣವೇನು? ಎಲ್ಲ ನೈತಿಕ ಹಾಗೂ ಧಾರ್ಮಿಕ ಪ್ರಜ್ಞೆಯ ಹಿನ್ನೆಲೆಯಲ್ಲೂ ಯಾರಾದರೂ ತಮ್ಮ ಗುರುತುಗಳನ್ನು ಬಚ್ಚಿಡುವುದು ತಪ್ಪು” ಎಂದು ಒತ್ತಿ ಹೇಳಿದ್ದಾರೆ.
ಜುಲೈ 11ರಿಂದ ಪ್ರಖ್ಯಾತ ಕನ್ವರ್ ಯಾತ್ರೆ ಪ್ರಾರಂಭಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಉತ್ತರಾಖಂಡದ ಬಿಜೆಪಿ ಸರಕಾರಗಳು ಕನ್ವರ್ ಮಾರ್ಗದಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಮಾಲಕರು ತಮ್ಮ ಮಳಿಗೆಗಳ ಮುಂದೆ ತಮ್ಮ ಭಾವಚಿತ್ರದೊಂದಿಗೆ, ತಮ್ಮ ಸ್ವವಿವರಗಳನ್ನು ಪ್ರದರ್ಶಿಸಬೇಕು ಎಂದು ಮಾರ್ಗಸೂಚಿ ಬಿಡುಗಡೆ ಮಾಡಿರುವುದು ವಿವಾದಕ್ಕೀಡಾಗಿದೆ. ಈ ಹಿನ್ನೆಲೆಯಲ್ಲಿ ಯೋಗ ಗುರು ಬಾಬಾ ಸ್ವಾಮಿ ರಾಮದೇವ್ ಅವರು ಬಿಜೆಪಿ ಸರಕಾರಗಳ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.