ಕಲಮಶ್ಶೇರಿ ಸ್ಫೋಟ ನಡೆಸಿದ್ದು ಡೊಮಿನಿಕ್ ಮಾರ್ಟಿನ್ : ದೃಢಪಡಿಸಿದ ಪೊಲೀಸ್
ಯೆಹೋವನ ಸಾಕ್ಷಿಗಳ ಪ್ರಾರ್ಥನಾ ಸಭೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟು, 50 ಕ್ಕೂ ಹೆಚ್ಚು ಜನರು ಗಾಯಗೊಂಡ ಐಇಡಿ ಸ್ಫೋಟಗಳನ್ನು ಮಾರ್ಟಿನ್ ಮಾಡಿದ್ದಾನೆ
ತ್ರಿಶೂರು: ಎರ್ನಾಕುಲಂನ ತಮ್ಮನಂನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕಡವಂತರಾ ಮೂಲದ ಡೊಮಿನಿಕ್ ಮಾರ್ಟಿನ್, ರವಿವಾರ ಕಲಮಶ್ಶೇರಿಯ ಕನ್ವೆನ್ಷನ್ ಸೆಂಟರ್ನ ಇಡೀ ಭದ್ರತಾ ವ್ಯವಸ್ಥೆಯನ್ನು ಬೆಚ್ಚಿಬೀಳಿಸಿದ ಸ್ಫೋಟದ ಹಿಂದಿನ ವ್ಯಕ್ತಿ ಎಂದು ಕೇರಳ ಪೊಲೀಸರು ಧೃಡಪಡಿಸಿದ್ದಾರೆ ಎಂದು onmanorama.com ವರದಿ ಮಾಡಿದೆ.
ರವಿವಾರ ಬೆಳಿಗ್ಗೆ ನಡೆದ ಯೆಹೋವನ ಸಾಕ್ಷಿಗಳ ಪ್ರಾರ್ಥನಾ ಸಭೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟು, 50 ಕ್ಕೂ ಹೆಚ್ಚು ಜನರು ಗಾಯಗೊಂಡ ಐಇಡಿ ಸ್ಫೋಟಗಳನ್ನು ಮಾರ್ಟಿನ್ ಮಾಡಿದ್ದಾನೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಕೊಡಕರ ಪೊಲೀಸ್ ಠಾಣೆಯಲ್ಲಿ ಮಧ್ಯಾಹ್ನ ಮಾರ್ಟಿನ್ ಶರಣಾಗಿದ್ದಾನೆ ಎಂದು ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೊಚ್ಚಿ-ಸೇಲಂ ರಾಷ್ಟ್ರೀಯ ಹೆದ್ದಾರಿಯ 544 ರಲ್ಲಿ ಸ್ಫೋಟ ಸ್ಥಳದಿಂದ ಸುಮಾರು 45 ಕಿಮೀ ದೂರದಲ್ಲಿ ಕೊಡಕರ ಪೊಲೀಸ್ ಠಾಣೆಯಿದೆ. ಶಂಕಿತ ವ್ಯಕ್ತಿ ದ್ವಿಚಕ್ರ ವಾಹನದಲ್ಲಿ ಕೊಡಕರಕ್ಕೆ ಬಂದಿದ್ದಾನೆ ಎನ್ನಲಾಗಿದೆ.
"ಆರೋಪಿ ಪೊಲೀಸ್ ಠಾಣೆ ಪ್ರವೇಶಿಸುವ ಸಮಯದಲ್ಲಿ ಪ್ರಕ್ಷುಬ್ಧರಾಗಿದ್ದನು. ಬಾಂಬ್ ಸ್ಫೋಟದ ಹೊಣೆಯನ್ನು ನಾನೇ ಮಾಡಿದ್ದೇನೆ ಎಂದು ಆತ ಹೊಣೆ ಹೊತ್ತನು. ಕಳೆದ ವಾರ ಆತ ರಚಿಸಿದ ಫೇಸ್ಬುಕ್ ಪ್ರೊಫೈಲ್ನಲ್ಲಿ ಸ್ಫೋಟದ ಕಾರಣವನ್ನು ಈಗಾಗಲೇ ಲೈವ್ ವೀಡಿಯೋ ಮೂಲಕ ಅಪ್ಲೋಡ್ ಮಾಡಲಾಗಿದೆ ಎಂದು ಆತ ಹೇಳಿದ್ದಾನೆ. ಶರಣಾದಾಗ, ತಕ್ಷಣ ಆರೋಪಿಯನ್ನು ಠಾಣೆಯೊಳಗೆ ಕರೆದೊಯ್ಯಲಾಯಿತು ”ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿ ಹೇಳಿದರು.
ಪ್ರಾಥಮಿಕ ವಿಚಾರಣೆಯ ನಂತರ, ಆರೋಪಿ ಮಾರ್ಟಿನ್ ನನ್ನು ತ್ರಿಶೂರ್ನಲ್ಲಿರುವ ಕೇರಳ ಪೊಲೀಸ್ ಅಕಾಡೆಮಿಗೆ ಕರೆದೊಯ್ಯಲಾಯಿತು, ನಂತರ ಎರ್ನಾಕುಲಂನಲ್ಲಿರುವ ಡಿಐಜಿ ಕಚೇರಿಗೆ ಸ್ಥಳಾಂತರಿಸಲಾಯಿತು.
ಮಾರ್ಟಿನ್ ಕಳೆದ ಆರು ತಿಂಗಳಿನಿಂದ ಆನ್ಲೈನ್ ವಿಡಿಯೋಗಳನ್ನು ನೋಡುವ ಮೂಲಕ ಬಾಂಬ್ ತಯಾರಿಸಲು ಸ್ವತಃ ತರಬೇತಿ ಪಡೆದಿದ್ದಾನೆ ಎಂದು ಮೂಲಗಳು ತಿಳಿಸಿವೆ. “ಆರೋಪಿ ಅಪರಾಧವನ್ನು ಒಬ್ಬನೇ ಮಾಡಿದ್ದಾನೆ ಎಂದು ಕಂಡು ಬರುತ್ತಿದೆ. ರಿಮೋಟ್ ಕಂಟ್ರೋಲ್ ಅನ್ನು ಬಳಸಿಕೊಂಡು ಸುಧಾರಿತ ಸ್ಫೋಟಕ ಸಾಧನವನ್ನು (IED) ಆತ ಸ್ಫೋಟಿಸಿದ್ದಾನೆ. ಮುಖ್ಯವಾಗಿ ಆನ್ಲೈನ್ ಪೋರ್ಟಲ್ಗಳಿಂದ ಸ್ಫೋಟಕ್ಕೆ ಬೇಕಾದ ಕಚ್ಛಾ ಸಾಧನಗಳನ್ನು ಆರೋಪಿ ಖರೀದಿಸಿದ್ದಾನೆ. ಮಾರ್ಟಿನ್ ತಾನು ಯೆಹೋವನ ಸಾಕ್ಷಿಗಳ ಮಾಜಿ ಸದಸ್ಯನೆಂದು ಹೇಳಿಕೊಂಡಿದ್ದಾನೆ. ಆ ಪಂಥದ ಚಟುವಟಿಕೆಗಳ ಬಗ್ಗೆ ಆರೋಪಿಗೆ ತೃಪ್ತಿಯಿರಲಿಲ್ಲ”ಎಂದು ಪೊಲೀಸ್ ಮೂಲಗಳು ಹೇಳಿದೆ.