×
Ad

ಪ್ರವಾಹಪೀಡಿತ ಪ್ರದೇಶಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದು, ಈಜುವುದು ಮಾಡಬೇಡಿ: ದಿಲ್ಲಿ ನಿವಾಸಿಗಳಿಗೆ ಕೇಜ್ರಿವಾಲ್ ಮನವಿ

ಪ್ರವಾಹಪೀಡಿತ ಪ್ರದೇಶಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಅಥವಾ ಈಜುವುದು ಮಾರಣಾಂತಿಕವಾಗುವ ಸಾಧ್ಯತೆ ಇರುವುದರಿಂದ ಯಾರೂ ಅಂತಹ ಪ್ರಯತ್ನ ಮಾಡಬಾರದು ಎಂದು ದಿಲ್ಲಿ ನಿವಾಸಿಗಳಿಗೆ ಮನವಿ ಮಾಡಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪ್ರವಾಹದ ಅಪಾಯ ಇನ್ನೂ ಮುಗಿದಿಲ್ಲ ಎಂದು ಎಚ್ಚರಿಸಿದ್ದಾರೆ.

Update: 2023-07-15 16:05 IST

Photo : PTI

ಹೊಸದಿಲ್ಲಿ: ಪ್ರವಾಹಪೀಡಿತ ಪ್ರದೇಶಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಅಥವಾ ಈಜುವುದು ಮಾರಣಾಂತಿಕವಾಗುವ ಸಾಧ್ಯತೆ ಇರುವುದರಿಂದ ಯಾರೂ ಅಂತಹ ಪ್ರಯತ್ನ ಮಾಡಬಾರದು ಎಂದು ದಿಲ್ಲಿ ನಿವಾಸಿಗಳಿಗೆ ಮನವಿ ಮಾಡಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪ್ರವಾಹದ ಅಪಾಯ ಇನ್ನೂ ಮುಗಿದಿಲ್ಲ ಎಂದು ಎಚ್ಚರಿಸಿದ್ದಾರೆ.

ವಾಯುವ್ಯ ದಿಲ್ಲಿಯ ಮುಕುಂದ್‌ಪುರ್ ಚೌಕ್ ಪ್ರದೇಶದಲ್ಲಿ ಪ್ರವಾಹದ ನೀರಿನಲ್ಲಿ ಸ್ನಾನ ಮಾಡುವಾಗ ಮುಳುಗಿ ಮೂವರು ಬಾಲಕರು ಮೃತಪಟ್ಟ ಘಟನೆ ಸಂಭವಿಸಿದ ಮೂರು ದಿನಗಳ ನಂತರ ಅವರಿಂದ ಈ ಮನವಿ ಬಂದಿದೆ.

"ಜಲಾವೃತ ಪ್ರದೇಶಗಳಲ್ಲಿ ಕೆಲವು ಜನರು ಆಟವಾಡಲು, ಈಜಲು, ಸೆಲ್ಫಿ ತೆಗೆದುಕೊಳ್ಳಲು ಅಥವಾ ವಿಡಿಯೊ ಚಿತ್ರೀಕರಣ ಮಾಡಲು ಹೋಗುತ್ತಿದ್ದಾರೆ ಎಂಬ ವರದಿಗಳು ಹಲವು ಪ್ರದೇಶಗಳಿಂದ ಬರುತ್ತಿವೆ. ದಯವಿಟ್ಟು ಈ ಕೆಲಸ ಮಾಡಬೇಡಿ. ಇದು ಮಾರಣಾಂತಿಕವಾಗುವ ಸಾಧ್ಯತೆ ಇದೆ. ಪ್ರವಾಹದ ಅಪಾಯವು ಇನ್ನೂ ಮುಗಿದಿಲ್ಲ. ನೀರಿನ ಹರಿವು ಇನ್ನೂ ತೀವ್ರವಾಗಿದ್ದು, ಯಾವುದೇ ಸಮಯದಲ್ಲಾದರೂ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇದೆ" ಎಂದು ಅವರು ಟ್ವೀಟ್ ಮೂಲಕ ಎಚ್ಚರಿಸಿದ್ದಾರೆ.

ತಮ್ಮ ಟ್ವೀಟ್‌ನಲ್ಲಿ ಅವರು PTI ಸುದ್ದಿ ಸಂಸ್ಥೆಯ ಶಾಂತಿ ವನದ ಪ್ರವಾಹದ ನೀರಿನಲ್ಲಿ ಆಟವಾಡುತ್ತಿರುವ ಮಕ್ಕಳ ವಿಡಿಯೊ ಹಂಚಿಕೊಂಡು, ಈ ಕೆಲಸವನ್ನು ನಿಲ್ಲಿಸಬೇಕು ಎಂದು ನಾನು ಎಲ್ಲರನ್ನೂ ಒತ್ತಾಯಿಸುತ್ತೇನೆ ಎಂದು ಆಗ್ರಹಿಸಿದ್ದಾರೆ.

ಹಲವಾರು ದಿನಗಳಿಂದ ಯಮುನಾ ನದಿಯ ಮೇಲ್ ಪಾತ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ದಿಲ್ಲಿ ನಗರದಲ್ಲಿನ ಯಮುನಾ ನದಿ ತೀರ ಉಕ್ಕೇರಿದ್ದು, ಪ್ರವಾಹದ ನೀರು ದಿಲ್ಲಿಯ ಹಲವಾರು ಪ್ರದೇಶಗಳಿಗೆ ನುಗ್ಗಿರುವುದರಿಂದ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಾವಿರಾರು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.

ಮೂರು ದಿನಗಳ ಕಾಲ ನಿರಂತರವಾಗಿ ಏರಿಕೆಯಾಗಿದ್ದ ಯಮುನಾ ನದಿಯಲ್ಲಿನ ನೀರಿನ ಮಟ್ಟವು ಶುಕ್ರವಾರದಿಂದ ತಗ್ಗಲು ಪ್ರಾರಂಭಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News