×
Ad

ದ್ರಾವಿಡ ಸಿದ್ಧಾಂತದಿಂದ ಆರ್ಯ, ದ್ರಾವಿಡ ಎಂಬ ಭಿನ್ನತೆ ಸೃಷ್ಟಿ: ತಮಿಳುನಾಡು ರಾಜ್ಯಪಾಲ

Update: 2025-03-03 22:45 IST

ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ | PTI 

ಚೆನ್ನೈ: ಕಳೆದ 60-70 ವರ್ಷಗಳಲ್ಲಿ ದ್ರಾವಿಡ ಸಿದ್ಧಾಂತದಿಂದಾಗಿ ಆರ್ಯ, ದ್ರಾವಿಡ ಎಂಬ ಭಿನ್ನತೆ ಸೃಷ್ಟಿಯಾಗಿದ್ದು, ಭಾರತೀಯ ಸಾಹಿತ್ಯದಲ್ಲಿ ಆರ್ಯನ್ನರು ಒಂದು ಜನಾಂಗವಾಗಿ ಉಲ್ಲೇಖವಾಗಿಲ್ಲ ಎಂದು ಸೋಮವಾರ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಹೇಳಿದರು.

ಇಲ್ಲಿನ ಡಿ.ಜಿ.ವೈಷ್ಣವ್ ಕಾಲೇಜಿನಲ್ಲಿ ‘ಇಂಡಸ್ ನಾಗರಿಕತೆ: ಅದರ ಸಂಸ್ಕೃತಿ ಮತ್ತು ಜನತೆ – ಪುರಾತತ್ವ ಒಳನೋಟಗಳು’ ಎಂಬ ವಿಷಯದ ಕುರಿತು ಆಯೋಜಿಸಲಾಗಿದ್ದ ಎರಡು ದಿನಗಳ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಗಮ ಸಾಹಿತ್ಯವಿರಲಿ ಅಥವಾ ವೇದ ಸಾಹಿತ್ಯಗಳಿರಲಿ, ಯಾವುದೇ ಭಾರತೀಯ ಸಾಹಿತ್ಯದಲ್ಲೂ ಆರ್ಯನ್ನರನ್ನು ಒಂದು ಜನಾಂಗವನ್ನಾಗಿ ಉಲ್ಲೇಖಿಸಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

“ವಾಸ್ತವವೆಂದರೆ, ತಮಿಳು ಸಾಹಿತ್ಯದಲ್ಲೂ ಆರ್ಯನ್ನರನ್ನು ಒಂದು ಜನಾಂಗವನ್ನಾಗಿ ಉಲ್ಲೇಖಿಸಲಾಗಿಲ್ಲ. ಕಳೆದ 60-70 ವರ್ಷಗಳಲ್ಲಿ ದ್ರಾವಿಡ ಸಿದ್ಧಾಂತವು ಆರ್ಯ, ದ್ರಾವಿಡ ಎಂಬ ಭಿನ್ನತೆಯನ್ನು ಸೃಷ್ಟಿಸಿದೆ” ಎಂದು ಅವರು ಪ್ರತಿಪಾದಿಸಿದರು.

ವೇದಗಳ ಮೂಲಕ ವಿವೇಕವನ್ನು ಅಂತರ್ಗತಗೊಳಿಸಿಕೊಂಡ ಈ ನಾಗರಿಕತೆ ಹೇಗೆ ಸಾವಿರಾರು ವರ್ಷಗಳಲ್ಲಿ ಭಾರತ ಹಾಗೂ ಅದರ ಸಂಸ್ಕೃತಿಯ ಕಲ್ಪನೆ ಮತ್ತು ಗುರುತನ್ನು ರೂಪಿಸಿತು, ಭಾರತದ ಐಕ್ಯತೆ ಹಾಗೂ ಸಾರ್ವತ್ರಿಕ ಭ್ರಾತೃತ್ವ ಮೌಲ್ಯಗಳನ್ನು ವ್ಯಾಖ್ಯಾನಿಸುವುದನ್ನು ಮುಂದುವರಿಸಿತು ಹಾಗೂ ನಮ್ಮ ವೈಯಕ್ತಿಕ, ರಾಷ್ಟ್ರೀಯ ಮತ್ತು ಜಾಗತಿಕ ದೃಷ್ಟಿಕೋನಗಳನ್ನು ಪ್ರೇರೇಪಿಸಿತು ಎಂದು ಅವರು ವಿಸ್ತೃತವಾಗಿ ವಿವರಿಸಿದರು.

ಅಸ್ಪಷ್ಟತೆ ಹಾಗೂ ತಪ್ಪು ವ್ಯಾಖ್ಯಾನಗಳ ಮೂಲಕ, ಆರ್ಯರ ಆಕ್ರಮಣ ಹಾಗೂ ಆರ್ಯ ಜನಾಂಗ ಎಂದು ತಪ್ಪಾಗಿ ಪ್ರಚಾರ ಮಾಡುತ್ತಿರುವ ಯೂರೋಪ್ ವಸಾಹುತಶಾಹಿಗಳಲ್ಲದೆ, ಮಾರ್ಕ್ಸ್ ವಾದಿಗಳು ಹಾಗೂ ದ್ರಾವಿಡ ಸಿದ್ಧಾಂತಿಗಳನ್ನು ವಿವಾಹವಾಗಿರುವವರ ತೀವ್ರ ಬೌದ್ಧಿಕತೆ ಮತ್ತು ರಾಜಕೀಯ ಹಿಂಸಾಚಾರದಿಂದ ಈ ನಾಗರಿಕತೆಯನ್ನು ರಕ್ಷಿಸಬೇಕಿದೆ ಎಂದು ಅವರು ಜನರಿಗೆ ಮನವಿ ಮಾಡಿದರು.

“ಸರಸ್ವತಿ-ಸಿಂಧು ನಾಗರಿಕತೆಯೇ ಇಡೀ ಭಾರತ ತಬ್ಬಿಕೊಂಡ ವೇದಕಾಲೀನ ನಾಗರಿಕತೆಯಾಗಿತ್ತು ಎಂಬ ಚಾರಿತ್ರಿಕ ಸತ್ಯವನ್ನು ಉಪಗ್ರಹ ಚಿತ್ರಗಳು ಹಾಗೂ ಅಣು ಭೌತಶಾಸ್ತ್ರ ಸೇರಿದಂತೆ ಆಧುನಿಕ ವಿಜ್ಞಾನವು ನಿರೂಪಿಸಿದೆ” ಎಂದೂ ಅವರು ಹೇಳಿದರು.

ನಮ್ಮ ಸಮಗ್ರ ರಾಷ್ಟ್ರೀಯತೆ ಪುನರುತ್ಥಾನಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಸರಸ್ವತಿ-ಸಿಂಧು ನಾಗರಿಕತೆಯ ನೈಜ ಇತಿಹಾಸ ನಿರೂಪಣೆಯಲ್ಲಿ ಜನರು ಸಕ್ರಿಯವಾಗಿ ತೊಡಗಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News