ಗುಜರಾತ್ | ‘ದೃಶ್ಯಂ’ ಚಿತ್ರದ ಮಾದರಿಯಲ್ಲಿ ಹತ್ಯೆ: ಮಹಿಳೆಯ ಪ್ರಿಯಕರನ ಸೆರೆ
Pc: FreePik
ಅಹಮದಾಬಾದ್: ಮಲಯಾಳಂನ ಬ್ಲಾಕ್ ಬಸ್ಟರ್ ಚಲನಚಿತ್ರ ‘ದೃಶ್ಯಂ' ಶೈಲಿಯಲ್ಲಿ ಮಹಿಳೆಯೊಬ್ಬರ ಪತಿಯನ್ನು ಆಕೆಯ ಪ್ರಿಯಕರ ಹತ್ಯೆಗೈದಿದ್ದು, ಆತನ ಮೃತದೇಹವನ್ನು ತನ್ನ ಇಬ್ಬರು ಸಂಬಂಧಿಕರ ನೆರವಿನೊಂದಿಗೆ ಅಡುಗೆ ಕೋಣೆಯ ನೆಲದ ಕೆಳಗೆ ಹುದುಗಿಸಿರುವ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.
ಸುಮಾರು ಒಂದು ವರ್ಷದಿಂದ ನಿಗೂಢವಾಗಿ ಕಣ್ಮರೆಯಾಗಿದ್ದ ಸಮೀರ್ ಅನ್ಸಾರಿ ಎಂಬ ವ್ಯಕ್ತಿಯ ಮೃತದೇಹದ ಮೂಳೆಗಳು ಹಾಗೂ ಇನ್ನಿತರ ಅವಶೇಷಗಳನ್ನು ಮಂಗಳವಾರ ರಾತ್ರಿ ಅಹಮದಾಬಾದ್ ನಗರದ ಸರ್ಖೇಜ್ ಪ್ರದೇಶದಲ್ಲಿನ ಚಿಲಕ ಹಾಕಿದ್ದ ಮನೆಯ ಅಡುಗೆ ಕೋಣೆಯಿಂದ ನಗರ ಅಪರಾಧ ವಿಭಾಗದ ಪೊಲೀಸರು ಹೊರ ತೆಗೆದಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಅಜಿತ್ ರಜಿಯಾನ್ ಹೇಳಿದ್ದಾರೆ.
ಇಮ್ರಾನ್ ವಘೇಲಾ ಎಂಬ ಪರಪುರುಷನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ, ಸದ್ಯ ತಲೆಮರೆಸಿಕೊಂಡಿರುವ ಸಮೀರ್ ಅನ್ಸಾರಿಯ ಪತ್ನಿ ರೂಬಿ, ತನ್ನ ಪತಿಯನ್ನು ಹತ್ಯೆಗೈದು, ಆತನ ದೇಹವನ್ನು ತುಂಡುತುಂಡಾಗಿ ಕತ್ತರಿಸಿ, ಅದನ್ನು ಅಡುಗೆ ಕೋಣೆಯ ನೆಲದಡಿ ಹೂತು ಹಾಕಲು ಇಮ್ರಾನ್ ವಘೇಲಾನ ಇಬ್ಬರು ಸಂಬಂಧಿಕರ ನೆರವು ಪಡೆದಿದ್ದಳು ಎಂದು ರಜಿಯಾನ್ ತಿಳಿಸಿದ್ದಾರೆ.
ಸುಮಾರು ಮೂರು ತಿಂಗಳ ಹಿಂದೆ, ಮೂಲತಃ ಬಿಹಾರ ನಿವಾಸಿಯಾದ ಸಮೀರ್ ಅನ್ಸಾರಿ ಎಂಬ ವ್ಯಕ್ತಿ ತುಂಬಾ ದಿನಗಳಿಂದ ಈ ಪ್ರದೇಶದಲ್ಲಿ ಕಾಣಿಸುತ್ತಿಲ್ಲ ಹಾಗೂ ಆತ ನಾಪತ್ತೆಯಾಗಿರುವ ಕುರಿತು ಯಾವುದೇ ಪೊಲೀಸ್ ದೂರು ಕೂಡಾ ದಾಖಲಾಗಿಲ್ಲ ಎಂಬ ಸುಳಿವನ್ನು ಅಪರಾಧ ವಿಭಾಗದ ಇನ್ಸ್ ಪೆಕ್ಟರ್ ಸ್ವೀಕರಿಸಿದ್ದರು ಎಂದು ಅವರು ಹೇಳಿದ್ದಾರೆ.
“ನಾವು ಆ ಪ್ರದೇಶದ ಮೇಲೆ ನಿಗಾ ಇರಿಸಿದಾಗ, ಸಮೀರ್ ಅನ್ಸಾರಿ ಕಳೆದ ಒಂದು ವರ್ಷದಿಂದ ನಾಪತ್ತೆಯಾಗಿದ್ದಾನೆ ಎಂಬ ಸಂಗತಿ ತಿಳಿದು ಬಂದಿತು. ವಿಚಾರಣೆಯ ವೇಳೆ ಗದ್ಗದಿತನಾದ ಇಮ್ರಾನ್ ವಘೇಲಾ, ಸಮೀರ್ ಅನ್ಸಾರಿ ಪತ್ನಿ ರೂಬಿಯ ಸೂಚನೆ ಮೇರೆಗೆ ನಾನು ನನ್ನ ಇನ್ನಿಬ್ಬರು ಸಂಬಂಧಿಕರೊಂದಿಗೆ ಆತನನ್ನು ಹತ್ಯೆಗೈದೆನು. ನಮ್ಮಿಬ್ಬರ ನಡುವಿನ ವಿವಾಹೇತರ ಸಂಬಂಧ ತಿಳಿದು ಬಂದ ನಂತರ, ಸಮೀರ್ ಅನ್ಸಾರಿ ಆಕೆಯನ್ನು ಥಳಿಸುತ್ತಿದ್ದ ಹಾಗೂ ನಮ್ಮಿಬ್ಬರ ನಡುವಿನ ಅಕ್ರಮ ಸಂಬಂಧಕ್ಕೆ ಸಮೀರ್ ಅನ್ಸಾರಿ ಅಡ್ಡಿ ಎಂದು ಭಾವಿಸಿದ ರೂಬಿ, ಈ ಹತ್ಯೆಯ ಯೋಜನೆಯನ್ನು ರೂಪಿಸಿದಳು ಎಂದು ಹೇಳಿಕೆ ನೀಡಿದ್ದಾನೆ” ಎಂದು ಅವರು ತಿಳಿಸಿದ್ದಾರೆ.
ವೃತ್ತಿಯಲ್ಲಿ ಗಾರೆ ಕಾರ್ಮಿಕನಾಗಿದ್ದ ಅನ್ಸಾರಿ, ರೂಬಿಯೊಂದಿಗೆ ಪ್ರೇಮ ವಿವಾಹವಾದ ನಂತರ, 2016ರಲ್ಲಿ ಬಿಹಾರದಿಂದ ಅಹಮದಾಬಾದ್ ಗೆ ಸ್ಥಳಾಂತರಗೊಂಡಿದ್ದ. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಫತೇವಾಡಿ ನಾಲೆ ಬಳಿಯ ಅಹ್ಮೆದಿ ವಠಾರದಲ್ಲಿದ್ದಾಗ, ರೂಬಿ, ಇಮ್ರಾನ್ ನ ಪ್ರೇಮಪಾಶಕ್ಕೆ ಬಿದ್ದಿದ್ದಳು. ಇದು ಆಕೆಯ ಪತಿ ಸಮೀರ್ ಅನ್ಸಾರಿಯನ್ನು ಕುಪಿತಗೊಳಿಸಿತ್ತು ಎಂದು ಅವರು ಹೇಳಿದ್ದಾರೆ.