×
Ad

ತನಗೆ ಕಚ್ಚಿದ ಹಾವನ್ನು ಜೇಬಿನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಬಂದ ಇ-ರಿಕ್ಷಾ ಚಾಲಕ!

ಮಥುರಾ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಕಾಲ ಆತಂಕ

Update: 2026-01-13 20:19 IST

Screengrab ; X  \@govindprataps12

ಮಥುರಾ: ತನಗೆ ಕಚ್ಚಿದ ಹಾವನ್ನು ಜಾಕೆಟ್ ಜೇಬಿನಲ್ಲೇ ಹಾಕಿಕೊಂಡು ಜಿಲ್ಲಾ ಆಸ್ಪತ್ರೆಗೆ ಬಂದ ಇ-ರಿಕ್ಷಾ ಚಾಲಕನೊಬ್ಬನಿಂದಾಗಿ ಉತ್ತರ ಪ್ರದೇಶದ ಮಥುರಾ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಕಾಲ ಭೀತಿ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಯಿತು. ಹಾವು ಕಚ್ಚಿದ ವ್ಯಕ್ತಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಥುರಾ ಬೈಪಾಸ್ ನಿವಾಸಿ ಇ-ರಿಕ್ಷಾ ಚಾಲಕ ದೀಪಕ್ ರಜಪೂತ್ ಅವರು ತಮ್ಮ ಇ-ರಿಕ್ಷಾಗೆ ಬ್ಯಾಟರಿ ಪಡೆಯಲು ವೃಂದಾವನಕ್ಕೆ ತೆರಳುತ್ತಿದ್ದಾಗ, ಮಥುರಾ–ವೃಂದಾವನ ನಡುವಿನ ಪಿಎಂಬಿ ಪಾಲಿಟೆಕ್ನಿಕ್ ಕಾಲೇಜು ಸಮೀಪದಲ್ಲಿ ಹಾವು ಏಕಾಏಕಿ ಅವರ ಇ-ರಿಕ್ಷಾದ ಮೇಲೆ ಹತ್ತಿ ಕೈಬೆರಳಿಗೆ ಕಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾವು ಕಚ್ಚಿದ ತಕ್ಷಣ ದೀಪಕ್ ಅದನ್ನು ಹಿಡಿದುಕೊಂಡು, ಜಾಕೆಟ್ ಒಳಗೆ ಇಟ್ಟುಕೊಂಡು ನೇರವಾಗಿ ಮಥುರಾ ಜಿಲ್ಲಾ ಆಸ್ಪತ್ರೆಗೆ ತೆರಳಿದ್ದಾರೆ.

ಆಸ್ಪತ್ರೆಯ ತುರ್ತು ವಿಭಾಗಕ್ಕೆ ಬಂದ ದೀಪಕ್, ವೈದ್ಯರ ಎದುರು ಜಾಕೆಟ್‌ನೊಳಗಿನಿಂದ ಹಾವನ್ನು ಹೊರತೆಗೆದು, “ಇದೇ ಹಾವು ನನಗೆ ಕಚ್ಚಿದೆ. ದಯವಿಟ್ಟು ಚಿಕಿತ್ಸೆ ನೀಡಿ” ಎಂದು ಮನವಿ ಮಾಡಿಕೊಂಡಿದ್ದಾರೆ. ಹಾವನ್ನು ಕೈಯಲ್ಲೇ ಹಿಡಿದುಕೊಂಡು ಮಾತನಾಡುತ್ತಿದ್ದ ಕಾರಣ ವೈದ್ಯರು ಹಾಗೂ ಸಿಬ್ಬಂದಿ ಕೆಲಕಾಲ ಅವರ ಹತ್ತಿರ ಹೋಗಲು ಹಿಂಜರಿದಿದ್ದಾರೆ ಎನ್ನಲಾಗಿದೆ.

ತುರ್ತು ವಾರ್ಡ್‌ನಲ್ಲಿ ಹಾವನ್ನು ಕಂಡ ರೋಗಿಗಳು, ಸಹಾಯಕರು ಹಾಗೂ ಸಿಬ್ಬಂದಿ ಭಯಭೀತರಾಗಿ ಅತ್ತಿತ್ತ ಓಡಾಡಿದ ಪರಿಣಾಮ ಆಸ್ಪತ್ರೆಯಲ್ಲಿ ಕೆಲಕಾಲ ಗದ್ದಲ ಉಂಟಾಯಿತು. ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಗಮನಿಸಿದ ವೈದ್ಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ದೀಪಕ್ ಅವರನ್ನು ಸಮಾಧಾನ ಪಡಿಸಿ, ಹಾವನ್ನು ಸುರಕ್ಷಿತವಾಗಿ ಪೆಟ್ಟಿಗೆಯಲ್ಲಿ ಹಾಕಿದರು. ಇದಾದ ಬಳಿಕ ಆಸ್ಪತ್ರೆಯಲ್ಲಿನ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿತು. ನಂತರ ದೀಪಕ್ ಅವರ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ದೀಪಕ್ ಮಾತನಾಡಿ, “ಹಾವು ಕಚ್ಚಿದ ನಂತರ ನಾನು ಪೊಲೀಸ್ ಅಧಿಕಾರಿಯನ್ನು ಭೇಟಿಯಾದೆ. ಅವರು ಇ-ರಿಕ್ಷಾವನ್ನು ಬಿಟ್ಟು ತಕ್ಷಣ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿದರು. ಭಯದಿಂದ ಇ-ರಿಕ್ಷಾವನ್ನು ರಸ್ತೆಯಲ್ಲೇ ಬಿಟ್ಟು ಓಡಿಹೋದೆ” ಎಂದು ಅವರು ಹೇಳಿದ್ದಾರೆ.

ಆಸ್ಪತ್ರೆಗೆ ಹಾವನ್ನು ತರಬೇಕಾದ ಅಗತ್ಯ ಏನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೀಪಕ್, “ನನಗೆ ಯಾವ ಹಾವು ಕಚ್ಚಿದೆ ಎಂಬುದು ವೈದ್ಯರಿಗೆ ಹೇಗೆ ತಿಳಿಯುತ್ತದೆ? ಅದು ನೀರು ಹಾವೋ ಅಥವಾ ಕಾಡಿನ ಹಾವೋ ಎಂದು ಗುರುತಿಸಲು ಹಾವನ್ನು ತೋರಿಸಬೇಕೆಂದುಕೊಂಡೆ. ಅದು ನಾಗರಹಾವು. ಅದನ್ನು ಎಲ್ಲೆಂದರಲ್ಲಿ ಬಿಡುವುದು ಅಪಾಯಕಾರಿಯಾಗಬಹುದು ಎಂದು ಭಾವಿಸಿದೆ” ಎಂದು ತಿಳಿಸಿದ್ದಾರೆ.

ಬಾಲ್ಯದಿಂದಲೇ ಅನೇಕ ಬಾರಿ ಹಾವು ಹಾಗೂ ಚೇಳು ಕಚ್ಚಿದ ಅನುಭವವಿದೆ ಎಂದು ದೀಪಕ್ ಪೊಲೀಸರಿಗೆ ತಿಳಿಸಿದ್ದಾರೆ. “ಹಾವು ಮತ್ತು ಚೇಳಿನ ವಿಷವು ನನ್ನ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಆದರೂ ಜೀವಕ್ಕೆ ಭಯ ಸಹಜ” ಎಂದು ಅವರು ಹೇಳಿದ್ದಾರೆ.

ಕರ್ತವ್ಯದಲ್ಲಿದ್ದ ವೈದ್ಯ ಸುಶೀಲ್ ಕುಮಾರ್ ಮಾತನಾಡಿ, “ಮೊದಲು ಹಾವನ್ನು ಸುರಕ್ಷಿತವಾಗಿ ಹೊರಗೆ ಇಡಲು ಸೂಚಿಸಲಾಯಿತು. ನಂತರ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಪ್ರಸ್ತುತ ಇ-ರಿಕ್ಷಾ ಚಾಲಕನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News