ಅಫ್ಘಾನ್-ತಾಝಿಕಿಸ್ತಾನ ಗಡಿಯಲ್ಲಿ ಭೂಕಂಪನ; ಉತ್ತರ ಭಾರತದಲ್ಲೂ ನಡುಗಿದ ಭೂಮಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಅಫ್ಘಾನಿಸ್ತಾನ-ತಾಝಿಕಿಸ್ತಾನ ಗಡಿಯಲ್ಲಿ ಶನಿವಾರ ಮಧ್ಯಾಹ್ನ 12.17ರ ವೇಳೆಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆ ದಾಖಲಾಗಿದೆ. ದಿಲ್ಲಿ- ರಾಷ್ಟ್ರ ರಾಜಧಾನಿ ಪ್ರಾಂತ ಹಾಗೂ ಜಮ್ಮುಕಾಶ್ಮೀರ ಸೇರಿದಂತೆ ಉತ್ತರ ಭಾರತದ ವಿವಿಧೆಡೆ ಭೂಮಿ ನಡುಗಿದ ಅನುಭವವಾಗಿದೆ. ಭೂಕಂಪನದಲ್ಲಿ ಸಾವು, ನೋವು ಸಂಭವಿಸಿರುವ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ.
ಭೂಕಂಪದ ಕೇಂದ್ರ ಬಿಂದು ಅಫ್ಘಾನಿಸ್ತಾನ-ತಾಜಿಕಿಸ್ತಾನ ಗಡಿಪ್ರದೇಶದಲ್ಲಿ ನೆಲದಿಂದ 94 ಕಿ.ಮೀ. ಆಳದಲ್ಲಿತ್ತೆಂದು ಭೂಕಂಪನಶಾಸ್ತ್ರ ಇಲಾಖೆ ತಿಳಿಸಿದೆ.
ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲಿಯೂ ವ್ಯಾಪಕವಾಗಿ ಭೂಕಂಪನದ ಅನುಭವವಾಗಿದೆ. ಇಸ್ಲಾಮಾಬಾದ್, ಲಾಹೋರ್, ರಾವಲ್ಪಿಂಡಿ,ಪೇ ಶಾವರ ಹಾಗೂ ಖೈಬರ್ ಪಖ್ತೂನ್ಖ್ವಾದ ಹಲವು ಪ್ರಾಂತಗಳು, ಲೋವರ್ ದಿರ್, ಬಜೌರ್, ಮಲಕ್ ನಾಡ್, ನೌಶೇರಾ, ದಿರ್ ಬಾಲಾ, ಶಬ್ಖಾದರ್ ಹಾಗೂ ಮೊಹಮಂಡ್ನಂತಹ ಹಲವಾರು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ್ದು, ನಿವಾಸಿಗಳಲ್ಲಿ ಭೀತಿಯನ್ನು ಮೂಡಿಸಿದೆ. ಆದರೆ ಯಾವುದೇ ಸಾವು, ನೋವು ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿರುವ ಬಗ್ಗೆ ವರದಿಗಳು ಬಂದಿಲ್ಲ.