×
Ad

ರೂ. 6,600 ಕೋಟಿ ಬಿಟ್‌ಕಾಯಿನ್‌ ಪೊಂಝಿ ಹಗರಣ: ಮಹಿಳೆಯ ಬಂಧನ

Update: 2023-12-19 17:50 IST

ಹೊಸದಿಲ್ಲಿ: ಬಿಟ್‌ಕಾಯಿನ್‌ ಪೊಂಝಿ ಯೋಜನೆಯ ಪ್ರವರ್ತಕರ ವಿರುದ್ಧದ ಇತ್ತೀಚಿನ ದಾಳಿಗಳ ನಂತರ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಹಾಗೂ ಮೂರು ಐಷಾರಾಮಿ ಕಾರುಗಳು, ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಈ ಬಿಟ್‌ಕಾಯಿನ್‌ ಹಗರಣದಲ್ಲಿ ರೂ. 6,600 ಕೋಟಿಯಷ್ಟು ಠೇವಣಿಯನ್ನು ಸಾರ್ವಜನಿಕರಿಂದ ಸಂಗ್ರಹಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈಯಲ್ಲಿ ಸಿಂಪಿ ಭಾರಧ್ವಾಜ್‌ ಅಲಿಯಾಸ್‌ ಸಿಂಪಿ ಗೌರ್‌ ಎಂಬಾಕೆಯನ್ನು ಡಿಸೆಂಬರ್‌ 17ರಂದು ಬಂಧಿಸಲಾಗಿದ್ದು ಆಕೆಯನ್ನು ಮರುದಿನ ಮುಂಬೈಯ ವಿಶೇಷ ಅಕ್ರಮ ಹಣ ವರ್ಗಾವಣೆ ಕಾಯಿದೆ ಪ್ರಕರಣದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆಕೆಯನ್ನು ಡಿಸೆಂಬರ್‌ 26ರ ತನಕ ಈಡಿ ಕಸ್ಟಡಿಗೆ ವಹಿಸಿದೆ ಎಂದು ನಿರ್ದೇಶನಾಲಯದ ಹೇಳಿಕೆ ತಿಳಿಸಿದೆ.

ತನಿಖೆಯನ್ನು ವೇರಿಯೇಬಲ್‌ ಪಿಟಿಇ ಲಿಮಿಟೆಡ್‌ ಎಂಬ ಕಂಪೆನಿಯ ವಿರುದ್ಧ ನಡೆಸಲಾಗಿತ್ತು ಹಾಗೂ ಅದು ಗೈನ್‌ ಬಿಟ್‌ಕಾಯಿನ್‌ ಪೊಂಝಿ ಸ್ಕೀಮ್‌ ನಡೆಸುತ್ತಿತ್ತೆಂದು ಈಡಿ ಹೇಳಿದೆ.

ಕಂಪನಿ ಮತ್ತದರ ಪ್ರವರ್ತಕರಾದ ಸಿಂಪಿ ಭಾರದ್ವಾಜ್‌, ಅಮಿತ್‌ ಭಾರದ್ವಾಜ್‌, ಅಜಯ್‌ ಭಾರದ್ವಾಜ, ಮಹೇಂದರ್ ಭಾರದ್ವಾಜ್‌ ಮತ್ತು ಹಲವಾರು ಎಂಎಲ್‌ಎಂ ಏಜಂಟರ ವಿರುದ್ಧ ಮಹಾರಾಷ್ಟ್ರ ಮತ್ತು ದಿಲ್ಲಿ ಪೊಲೀಸರು ಹಲವಾರು ಎಫ್‌ಐಆರ್‌ ದಾಖಲಿಸಿದ್ದರು.

ಹೂಡಿಕೆಯ ಹೆಸರಿನಲ್ಲಿ ಆರೋಪಿಗಳು ಬಿಟ್‌ಕಾಯಿನ್‌ ರೂಪದಲ್ಲಿ ಸಾರ್ವಜನಿಕರಿಂದ ರೂ 6,600 ಕೋಟಿ ಸಂಗ್ರಹಿಸಿದ್ದರೆಂದು ಆರೋಪಿಸಲಾಗಿದೆ.

ಅಮಾಯಕ ಹೂಡಿಕೆದಾರರಿಗೆ ಆಮಿಷವೊಡ್ಡುವಲ್ಲಿ ಸಿಂಪಿ, ಆಕೆಯ ಪತಿ ಅಜಯ್‌ ಮತ್ತು ಇತರ ಏಜಂಟರು ಸಕ್ರಿಯ ಪಾತ್ರ ನಿರ್ವಹಿಸಿದ್ದರು, ದೊಡ್ಡ ಮೊತ್ತದ ಹಣ ದೊರೆಯಲಿದೆ ಎಂದು ಹೇಳಿ ಜನರನ್ನು ನಂಬಿಸಿ ವಂಚನೆಗೈಯ್ಯಲಾಗಿದೆ ಎಂದು ಆರೋಪಿಸಲಾಗಿದೆ.

ದಾಳಿಗಳ ವೇಳೆ ಮರ್ಸಿಡಿಸ್‌, ಆಡಿ ಕಾರು ಸಹಿತ ಮೂರು ಕಾರುಗಳು, ರೂ 18.91 ಲಕ್ಷ ಮೌಲ್ಯದ ಚಿನ್ನಾಭರಣಗಳು ಸೇರಿದಂತೆ ಇಲ್ಲಿಯ ತನಕ ರೂ. 69 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಮುಖ ಆರೋಪಿಗಳಾದ ಅಜಯ್‌ ಭಾರದ್ವಾಜ್‌ ಮತ್ತು ಮಹೇಂದರ್‌ ಭಾರದ್ವಾಜ್‌ ತಲೆಮರೆಸಿಕೊಂಡಿದ್ದಾರೆ ಎಂದು ಈಡಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News