750 ಕೋ.ರೂ. ನಕಲಿ ಐಟಿಸಿ ಹಗರಣ : ದೇಶಾದ್ಯಂತ 12 ಸ್ಥಳಗಳಲ್ಲಿ ಈಡಿ ದಾಳಿ
ರಾಂಚಿ, ಆ. 7: ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಈ.ಡಿ.) ಜಾರ್ಖಂಡ್, ಪಶ್ಚಿಮಬಂಗಾಳ ಹಾಗೂ ಮಹಾರಾಷ್ಟ್ರದ 12 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಈ ಪ್ರಕರಣ ಜಾರ್ಖಂಡ್‌ನಲ್ಲಿ ಬೇನಾಮಿ ಕಂಪೆನಿಗಳು ಹಾಗೂ ಅನಧಿಕೃತ ಹಣಕಾಸುವ ವಾಹಿನಿಗಳು ಭಾಗಿಯಾಗಿರುವ 750 ಕೋ.ರೂ. ‘‘ನಕಲಿ’’ ಖರೀದಿ ತೆರಿಗೆಗೆ ಸಂಬಂಧಿಸಿದೆ. ಅಪರಾಧದಿಂದ ಬಂದ ಆದಾಯವನ್ನು ಅಕ್ರಮವಾಗಿ ವರ್ಗಾಯಿಸುವಲ್ಲಿ ಹಲವು ವ್ಯಕ್ತಿಗಳು ಹಾಗೂ ಸಂಸ್ಥೆಗಳು ಭಾಗಿಯಾಗಿರುವುದನ್ನು ಸೂಚಿಸುವ ವಿಶ್ವಾಸಾರ್ಹ ಪುರಾವೆಗಳ ಆಧಾರದಲ್ಲಿ ಈ ದಾಳಿ ನಡೆಸಲಾಗಿದೆ.
ಈ ಹಿಂದೆ ಜಿಎಸ್ಟಿ ಹಗರಣದಲ್ಲಿ ಮೊದಲ ಸುತ್ತಿನ ದಾಳಿಯ ಸಂದರ್ಭ ಜಾರಿ ನಿರ್ದೇಶನಾಲಯ ಕೋಲ್ಕತ್ತಾದ ಶಿವ ಕುಮಾರ್ ದೇವೋರಾ ಹಾಗೂ ಜೆಮ್ಶೆದ್‌ಪುರದ ಅಮಿತ್ ಅಗರ್ವಾಲ್ ಆಲಿಯಾಸ್ ವಿಕ್ಕಿ ಭಲೋಟಿಯಾ ಸೇರಿದಂತೆ ನಾಲ್ವರನ್ನು ಬಂಧಿಸಿತ್ತು. ವಿಚಾರಣೆ ಸಂದರ್ಭ ನಕಲಿ ಬಿಲ್‌ಗಳನ್ನು ಮಾಡುವ ಮೂಲಕ ಸರಕು ಮಾರಾಟ ಹಾಗೂ ಖರೀದಿಯ ವಹಿವಾಟನ್ನು ಕಾಗದದಲ್ಲಿ ಮಾತ್ರ ತೋರಿಸಲಾಗಿದೆ ಹಾಗೂ ಐಟಿಸಿಯನ್ನು ದುರ್ಬಳಕೆ ಮಾಡಲಾಗಿದೆ ಎಂಬುದು ಪತ್ತೆಯಾಗಿತ್ತು.
ಈ ಹಗರಣದಲ್ಲಿ ಇನ್ನಷ್ಟು ಜನರು ಭಾಗಿಯಾಗಿರುವ ಕುರಿತು ಮಾಹಿತಿ ದೊರಕಿದ ಬಳಿಕ ಜಾರಿ ನಿರ್ದೇಶನಾಲಯ ಎರಡನೇ ಸುತ್ತಿನ ದಾಳಿ ಆರಂಭಿಸಿತ್ತು. 2024 ಜೂನ್ 25ರಂದು ಜಿಎಸ್ಟಿ ಹಗರಣದ ಆರೋಪದಲ್ಲಿ ಜೆಮ್ಶೆದ್‌ಪುರದ ಗುಜಿರಿ ಉದ್ಯಮಿ ಬಾಬು ಜೈಸ್ವಾಲ್ ಆಲಿಯಾಸ್ ಜ್ಞಾನ್ಚಂದ್ ಜೈಸ್ವಾಲ್‌ನನ್ನು ಕೂಡ ಬಂಧಿಸಲಾಗಿತ್ತು.