×
Ad

ಅಕ್ರಮ ಹಣ ವರ್ಗಾವಣೆ ಪ್ರಕರಣ: ಟಾಲಿವುಡ್ ನಟ ಮಹೇಶ್ ಬಾಬುಗೆ ಈಡಿ ಸಮನ್ಸ್

Update: 2025-04-22 12:14 IST

ನಟ ಮಹೇಶ್ ಬಾಬು (PTI)

ಹೈದರಾಬಾದ್: ಕೆಲವು ಸ್ಥಳೀಯ ಗುಂಪುಗಳು ನಡೆಸಿವೆಯೆನ್ನಲಾದ ರಿಯಲ್ ಎಸ್ಟೇಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮಂಗಳವಾರ ಟಾಲಿವುಡ್‌ನ ತಾರಾ ನಟ ಮಹೇಶ್ ಬಾಬುಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿಗೊಳಿಸಿದೆ.

ಹೈದರಾಬಾದ್‌ನಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಎಪ್ರಿಲ್ 28ರಂದು ಹಾಜರಾಗುವಂತೆ ಮಹೇಶ್ ಬಾಬುಗೆ ಸೂಚಿಸಲಾಗಿದ್ದು, ಅವರ ಹೇಳಿಕೆಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ದಾಖಲಿಸಿಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣವು ವೆಂಗಲ್ ರಾವ್ ನಗರ ಮೂಲದ ಖ್ಯಾತ ಸಾಯಿ ಸೂರ್ಯ ಡೆವಲಪರ್ಸ್, ಸುರಾನಾ ಸಮೂಹ ಹಾಗೂ ಇನ್ನಿತರರಿಗೆ ಸಂಬಂಧಿಸಿದ್ದಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಪ್ರಿಲ್ 16ರಂದು ಸಿಕಂದರಾಬಾದ್, ಜ್ಯುಬಿಲಿ ಹಿಲ್ಸ್ ಹಾಗೂ ಬೊವೇನ್‌ಪಲ್ಲಿಯ ವಿವಿಧ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಶೋಧ ಕಾರ್ಯಾಚರಣೆ ನಡೆಸಿತ್ತು

ಸದ್ಯ ಮಹೇಶ್ ಬಾಬು ಅವರನ್ನು ಆರೋಪಿಯನ್ನಾಗಿ ವಿಚಾರಣೆಗೊಳಪಡಿಸಲಾಗುವುದಿಲ್ಲ ಹಾಗೂ ಅವರು ಈ ಹಗರಣದಲ್ಲಿ ಭಾಗಿಯಾಗಿರುವಂತಿಲ್ಲ. ಈ ವಂಚನೆ ಆರೋಪದ ಅರಿವಿಲ್ಲದೆ ಅವರು ಆರೋಪಿ ಕಂಪನಿಗಳ ರಿಯಾಲಿಟಿ ಯೋಜನೆಗಳನ್ನು ಅನುಮೋದಿಸಿರಬಹುದು ಎಂದು ಮೂಲಗಳು ಹೇಳಿವೆ.

ನಟ ಮಹೇಶ್ ಬಾಬು ಅವರು ಆರೋಪಿ ಕಂಪನಿಗಳ ಪರವಾಗಿನ ಪ್ರಚಾರಕ್ಕಾಗಿ ಚೆಕ್‌ಗಳು ಹಾಗೂ ನಗದಿನ ಮೂಲಕ ನಡೆಸಿರುವ 5.9 ಕೋಟಿ ರೂ. ಮೌಲ್ಯದ ವಹಿವಾಟಿನ ಕುರಿತು ಮಾಹಿತಿ ಪಡೆಯಲು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಟ ಮಹೇಶ್ ಬಾಬು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News