ಮುಂಬೈ ವಾಯವ್ಯ ಕ್ಷೇತ್ರದ ಶಿವಸೇನಾ (ಉದ್ಧವ್) ಬಣದ ಅಭ್ಯರ್ಥಿ ಕೀರ್ತಿಕರ್ ಗೆ ಈಡಿ ನೋಟಿಸ್
Photo: PTI
ಮುಂಬೈ : ಮುಂಬೈ ವಾಯವ್ಯ ಲೋಕಸಭಾ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯಾಗಿ ಅಮೋಲ್ ಕೀರ್ತಿಕರ್ ಅವರನ್ನು ಶಿವಸೇನಾ (ಉದ್ಧವ್ ಠಾಕ್ರೆ ಬಣ) ಘೋಷಿಸಿದ ಬೆನ್ನಲ್ಲೇ ಕೋವಿಡ್ 19 ಸಾಂಕ್ರಾಮಿಕದ ಹಾವಳಿಯ ಸಂದರ್ಭ ಕಿಚಡಿ ಆಹಾರದ ವಿತರಣೆಯಲ್ಲಿ ನಡೆದಿತ್ತೆನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿ ಅವರಿಗೆ ಜಾರಿ ನಿರ್ದೇಶನಾಲಯವು (ಈಡಿ) ನೋಟಿಸ್ ಜಾರಿಗೊಳಿಸಿದೆ.
ವಿತರಣೆಯ ಗುತ್ತಿಗೆಯನ್ನು ಪಡೆದುಕೊಂಡಿದ್ದ ವ್ಯಾಪಾರಿಗೆ ಕೀರ್ತಿಕರ್ ನೆರವಾಗಿದ್ದರು ಹಾಗೂ ಈ ವಿಷಯವಾಗಿ ಹಲವಾರು ಲಕ್ಷ ರೂ.ಗಳ ಅವ್ಯವಹಾರ ನಡೆಸಿದ್ದಾರೆಂದು ಈಡಿ ಶಂಕಿಸಿರುವುದಾಗಿ ಅವು ಹೇಳಿವೆ. ಆದರೆ ತನ್ನ ವಿರುದ್ಧ ಆರೋಪಗಳನ್ನು ಕೀರ್ತಿಕರ್ ತಳ್ಳಿಹಾಕಿದ್ದಾರೆ.
ಕೀರ್ತಿಕರ್ ವಿರುದ್ಧ ಜಾರಿ ನಿರ್ದೇಶನಾಲಯವು ಕ್ರಮ ಕೈಗೊಂಡಿದ್ದರೂ, ಅವರ ಉಮೇದುವಾರಿಕೆ ಬದಲಾಗದೆಂದು ರಾವತ್ ತಿಳಿಸಿದ್ದಾರೆ.
ಮುಂಬೈ ಪೊಲೀಸರ ಆರ್ಥಿಕ ಅಪರಾಧ ದಳ (ಇಓಡಬ್ಲ್ಯು)ವು ಸೆಪ್ಟೆಂಬರ್ ನಲ್ಲಿ ಕೀರ್ತಿಕರ್ ಅವರನ್ನು ಪ್ರಶ್ನಿಸಿತ್ತು. ಈ ಪ್ರಕರಣದಲ್ಲಿ ನಂಟು ಹೊಂದಿದ್ದರೆನ್ನಲಾದ ಶಿವಸೇನಾ (ಉದ್ಧವ್ ಬಣ) ಪದಾಧಿಕಾರಿ ಸೂರಜ್ ಚವಾಣ್ ವಿರುದ್ಧವೂ ಜಾರಿ ನಿರ್ದೇಶನಾಲಯವು ದೋಷಾರೋಪ ಪಟ್ಟಿ ಸಲ್ಲಿಸಿದೆ ಮತ್ತು ತಾತ್ಕಾಲಿಕವಾಗಿ 88.51 ಲಕ್ಷ ರೂ. ಮೌಲ್ಯದ ಅವರ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿದೆ. ಕಿಚಡಿ ವಿತರಣೆ ಗುತ್ತಿಗೆಯಲ್ಲಿ ಅವ್ಯವಹಾರ ನಡೆಸಿ ಚವಾಣ್ ಅವರು 1.35 ಕೋಟಿ ರೂ. ಪಡೆದುಕೊಂಡಿದ್ದಾರೆಂದು ಈಡಿ ಆಪಾದಿಸಿದೆ.
ಗಡ್ಕರಿ ನಾಮಪತ್ರ ಸಲ್ಲಿಕೆ
ಕೇಂದ್ರ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಹಾರಾಷ್ಟ್ರದ ನಾಗಪುರ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ನಾಗಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರು ನಾಮಪತ್ರ ಸಲ್ಲಿಸಿದರು. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಎನ್ಸಿಪಿ ಪ್ರಫುಲ್ ಪಟೇಲ್, ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬನ್ವಾನ್ಕುಳೆ, ಆರ್ಪಿಐ ಹಾಗೂ ಶಿವಸೇನಾ (ಶಿಂಧೆ ಬಣ)ದ ನಾಯಕರು ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಕೆಗೆ ಬುಧವಾರ ಕೊನೆ ದಿನವಾಗಿತ್ತು.