×
Ad

ಎಲ್ಗಾರ್ ಪರಿಷದ್ ಪ್ರಕರಣ | ದಿಲ್ಲಿಯಲ್ಲಿ ಕಾಯಂ ವಾಸಕ್ಕೆ ಅನುಮತಿ ಕೋರಿದ್ದ ನವಲಖಾ ಅರ್ಜಿಗೆ ವಿಶೇಷ ಎನ್‌ಐಎ ನ್ಯಾಯಾಲಯದ ತಿರಸ್ಕಾರ

Update: 2025-06-20 20:24 IST

ಗೌತಮ್ ನವಲಖಾ | PC : NDTV

ಮುಂಬೈ: ಎಲ್ಗಾರ್ ಪರಿಷದ್ ಪ್ರಕರಣದ ಆರೋಪಿ ಪತ್ರಕರ್ತ ಗೌತಮ್ ನವಲಖಾ ಅವರು ದಿಲ್ಲಿಯಲ್ಲಿ ಕಾಯಂ ವಾಸಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿಯ ವಿಶೇಷ ಎನ್‌ಐಎ ನ್ಯಾಯಾಲಯವು ತಿರಸ್ಕರಿಸಿದೆ. ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗೆ ಶಾಶ್ವತವಾಗಿ ವಾಸಿಸುವುದು ಕೇವಲ ವ್ಯಾಪ್ತಿಯಿಂದಾಚೆಗೆ ಪ್ರಯಾಣಿಸುವುದಕ್ಕಿಂತ ಸಂಪೂರ್ಣವಾಗಿ ಪ್ರತ್ಯೇಕ ವಿಷಯವಾಗಿದೆ ಎಂದು ಅದು ಅಭಿಪ್ರಾಯಿಸಿದೆ.

ನವಲಖಾ ಆರ್ಥಿಕ ಸಂಕಷ್ಟ, ನಿರುದ್ಯೋಗ ಮತ್ತು ತನ್ನ ಅನಾರೋಗ್ಯ ಪೀಡಿತ 86 ವರ್ಷ ಪ್ರಾಯದ ಸೋದರಿಯನ್ನು ಉಲ್ಲೇಖಿಸಿ ಎಪ್ರಿಲ್‌ ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು.

ಉಚ್ಚ ನ್ಯಾಯಾಲಯವು ಆರೋಪಿಗಾಗಲೀ ಈ ನ್ಯಾಯಾಲಯಕ್ಕಾಗಲೀ ಅಂತಹ ಸ್ವಾತಂತ್ರ್ಯವನ್ನು ನೀಡಿಲ್ಲ. ಹೀಗಾಗಿ ಅನಗತ್ಯ ಅರ್ಜಿಯು ತಿರಸ್ಕಾರಕ್ಕೆ ಅರ್ಹವಾಗಿದೆ ಎಂದು ಗುರುವಾರ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಧೀಶರು ಹೇಳಿದರು.

ಬಾಂಬೆ ಉಚ್ಚ ನ್ಯಾಯಾಲಯವು ಆರೋಪಿಗೆ ಷರತ್ತುಬದ್ಧ ಜಾಮೀನನ್ನು ಮಂಜೂರು ಮಾಡಿದ್ದ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯದ ಪೂರ್ವಾನುಮತಿ ಪಡೆಯದೇ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗೆ ಪ್ರಯಾಣಿಸದಂತೆ ಅವರಿಗೆ ನಿರ್ದೇಶನ ನೀಡಿತ್ತು ಎಂದು ಹೇಳಿದ ನ್ಯಾಯಾಧೀಶರು, ಅಂದರೆ ಆರೋಪಿಯು ನೀಡುವ ಕಾರಣಗಳು ಅರ್ಹವೆಂದು ಈ ನ್ಯಾಯಾಲಯವು ಭಾವಿಸಿದರೆ ಆರೋಪಿಯು ತನ್ನ ಪ್ರಾದೇಶಿಕ ವ್ಯಾಪ್ತಿಯನ್ನು ಮೀರಿ ಪ್ರಯಾಣಿಸಲು ಅನುಮತಿಸುವ ಸ್ವಾತಂತ್ರ್ಯವನ್ನು ಈ ನ್ಯಾಯಾಲಯಕ್ಕೆ ನೀಡಿದೆ ಎಂದು ಅರ್ಥ. ಆರೋಪಿಯು ಈ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗೆ ಕಾಯಂ ಆಗಿ ವಾಸಿಸಲು ಅವಕಾಶ ನೀಡುವ ವಿವೇಚನಾಧಿಕಾರವನ್ನು ಉಚ್ಚ ನ್ಯಾಯಾಲಯವು ಈ ನ್ಯಾಯಾಲಯಕ್ಕೆ ಮಂಜೂರು ಮಾಡಿಲ್ಲ ಎಂದು ಹೇಳಿದರು.

ನವಲಖಾ 2023ರಲ್ಲಿ ಜಾಮಿನು ಪಡೆದಿದ್ದರಾದರೂ 2024ರಲ್ಲಿ ಜೈಲಿನಿಂದ ಬಿಡುಗಡೆಗೊಂಡಿದ್ದರು. ಪ್ರಸ್ತುತ ಅವರು ಮುಂಬೈನ ಬಾಂದ್ರಾ(ಪಶ್ಚಿಮ)ದಲ್ಲಿ ವಾಸವಾಗಿದ್ದಾರೆ.

ನವಲಖಾ(72) ಮತ್ತು ಅವರ ಸಂಗಾತಿ ಸಹ್ಬಾ ಹುಸೇನ್(73) ದಿಲ್ಲಿಯ ಕಾಯಂ ನಿವಾಸಿಗಳಾಗಿದ್ದು, ಅಲ್ಲಿ ಅವರು ಮನೆ, ಉದ್ಯೋಗ ಮತ್ತು ಸಾಮಾಜಿಕ ಸಂಪರ್ಕಗಳನ್ನು ಹೊಂದಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ಪ್ರಾಸಿಕ್ಯೂಷನ್ ನವಲಖಾರ ಅರ್ಜಿಯನ್ನು ಬಲವಾಗಿ ವಿರೋಧಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News