ಎಲ್ಗಾರ್ ಪರಿಷತ್ ಪ್ರಕರಣ : ರಮೇಶ್ ಗಾಯಿಚೋರ್ ಜಾಮೀನಿನ ಮೇಲೆ ಬಿಡುಗಡೆ
ರಮೇಶ್ ಗಾಯಿಚೋರ್ | PC : PTI
ಮುಂಬೈ, ಸೆ.11: ಎಲ್ಗಾರ್ ಪರಿಷತ್-ಮಾವೋವಾದಿ ನಂಟಿನ ಪ್ರಕರಣದಲ್ಲಿ ಆರೋಪಿಯಾಗಿರುವ ಸಾಮಾಜಿಕ ಹೋರಾಟಗಾರ ರಮೇಶ್ ಗಾಯಿಚೋರ್‌ರಿಗೆ ತಾತ್ಕಾಲಿಕ ಜಾಮೀನು ದೊರೆತಿರುವ ಹಿನ್ನೆಲೆಯಲ್ಲಿ ಅವರನ್ನು ಬುಧವಾರ ಬಿಡುಗಡೆಗೊಳಿಸಲಾಗಿದೆ.
ತನ್ನ ಅಸ್ವಸ್ಥ ತಂದೆಯನ್ನು ಭೇಟಿ ಮಾಡಲು ರಮೇಶ್ ಗಾಯಿಚೋರ್ ಅವರಿಗೆ ಬಾಂಬೆ ಹೈಕೋರ್ಟ್ ಆಗಸ್ಟ್ 26ರಂದು ತಾತ್ಕಾಲಿಕ ಜಾಮೀನು ನೀಡಿತ್ತು. ಅವರನ್ನು ನವಿ ಮುಂಬೈನ ತಲೋಜಾ ಜೈಲಿನಿಂದ ಬುಧವಾರ ರಾತ್ರಿ ಬಿಡುಗಡೆಗೊಳಿಸಲಾಗಿದೆಯೆಂದು ಕಾರಾಗೃಹದ ಅಧಿಕಾರಿಗಳು ಬುಧವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಹೈಕೋರ್ಟ್ ಆದೇಶವನ್ನು ಅನುಸರಿಸದೆ ಇರುವುದರಿಂದ ರಮೇಶ್ ಅವರ ಬಿಡುಗಡೆ ವಿಳಂಬಗೊಂಡಿದ್ದು, ಇದಕ್ಕಾಗಿ ನಿಶ್ಶರ್ತ ಕ್ಷಮೆಯಾಚಿಸುವುದಾಗಿಯೂ ಜೈಲು ಅಧೀಕ್ಷಕರು ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ರಮೇಶ್ ಗಾಯಿಚೋರ್ ಅವರು ಬುಧವಾರ ರಾತ್ರಿ ಜೈಲಿನಿಂದ ಬಿಡುಗಡೆಗೊಂಡಿದ್ದಾರೆಂದು ಅವರು ಹೇಳಿದ್ದಾರೆ.
ಜೈಲು ಅಧೀಕ್ಷಕರ ಅಫಿಡವಿಟ್ ಅನ್ನು ಪುರಸ್ಕರಿಸಿದ ನ್ಯಾಯಾಲಯವು, ತನ್ನ ಹಿಂದಿನ ಆದೇಶದಲ್ಲಿ ಮಾರ್ಪಾಡು ಮಾಡಿದ್ದು, ಗಾಯಿಚೋರ್ ಅವರಿಗೆ ಸೆಪ್ಟೆಂಬರ್ 13ರವರೆಗೆ ತಾತ್ಕಾಲಿಕ ಜಾಮೀನನ್ನು ನೀಡಿದೆ.
2017ರ ಡಿಸೆಂಬರ್ 31ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷತ್ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಆರೋಪದಲ್ಲಿ ಗಾಯಿಚೋರ್ ಹಾಗೂ ಇತರ ಹಲವಾರು ಕಾರ್ಯಕರ್ತರನ್ನು ಬಂಧಿಸಲಾಗಿತ್ತು.