×
Ad

ಮಹಾ ಕುಂಭ ಮೇಳ: ಪವಿತ್ರ ಸ್ನಾನ ಮಾಡಲು ಬಂದ ಮದ್ಯ ಕಳ್ಳಸಾಗಣೆದಾರನ ಬಂಧನ!

Update: 2025-01-27 10:38 IST

ಸಾಂದರ್ಭಿಕ ಚಿತ್ರ 

ಭದೋಹಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಲು ಆಗಮಿಸಿದ್ದ, ತಿಂಗಳುಗಟ್ಟಲೆ ಬಂಧನದಿಂದ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡಿದ್ದ ಮದ್ಯ ಕಳ್ಳಸಾಗಣೆದಾರನನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ.

ಮಹಾ ಕುಂಭ ಮೇಳ ನಡೆಯುತ್ತಿರುವ ಸಮಯದಲ್ಲಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ರವಿವಾರ ಪ್ರಯಾಗ್‌ರಾಜ್‌ಗೆ ಆಗಮಿಸಿದ ಲಕ್ಷಾಂತರ ಜನರಂತೆ, 22 ವರ್ಷದ ಪ್ರವೇಶ್ ಯಾದವ್ ಕೂಡ ಬಂದಿದ್ದ ಎನ್ನಲಾಗಿದೆ.

ಮದ್ಯ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಪ್ರವೇಶ್ ಯಾದವ್ ಜುಲೈ 2023 ರಿಂದ ಬಂಧನದಿಂದ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ. ಆದರೆ ಈ ಬಾರಿ ಆತ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಲವಾದ ಪೊಲೀಸ್ ಕಣ್ಗಾವಲು ಕಾರಣದಿಂದಾಗಿ ಪ್ರಯಾಗ್‌ರಾಜ್‌ನ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಪೊಲೀಸರು ಆತನನ್ನು ಬಂಧಿಸಿದರು ಎಂದು ಭದೋಹಿ ಪೊಲೀಸ್ ವರಿಷ್ಠಾಧಿಕಾರಿ ಅಭಿಮನ್ಯು ಮಾಂಗ್ಲಿಕ್ ರವಿವಾರ ತಿಳಿಸಿದ್ದಾರೆ.

ಜುಲೈ 29, 2023 ರಂದು ರಾಷ್ಟ್ರೀಯ ಹೆದ್ದಾರಿ-19 ರಲ್ಲಿ ವಾಹನಗಳ ತಪಾಸಣೆಯ ಸಮಯದಲ್ಲಿ, ಅಲ್ವಾರ್ ನಿಂದ ಬಿಹಾರಕ್ಕೆ ಕಳ್ಳಸಾಗಣೆ ಮಾಡಲು ತರುತ್ತಿದ್ದ ಕಲಬೆರಕೆ ಮದ್ಯವನ್ನು ವಶಪಡಿಸಿಕೊಳ್ಳಲಾಗಿತ್ತು. ಪ್ರಕರಣಕ್ಕೆ ಪ್ರದೀಪ್ ಯಾದವ್ ಮತ್ತು ರಾಜ್ ಡೊಮೊಲಿಯಾ ಅವರನ್ನು ಭದೋಹಿಯ ಉಂಜ್ ಪೊಲೀಸ್ ಠಾಣೆ ಪ್ರದೇಶದಿಂದ ಬಂಧಿಸಲಾಗಿತ್ತು. ಪ್ರವೇಶ್ ಯಾದವ್ ಸ್ಥಳದಿಂದ ಪರಾರಿಯಾಗಿದ್ದನು. ಎಲ್ಲರೂ ಅಲ್ವಾರ್ ಜಿಲ್ಲೆಯ ನಿವಾಸಿಗಳಾಗಿದ್ದು, ಬಿಹಾರದಲ್ಲಿ ದೀರ್ಘಕಾಲದಿಂದ ಅಕ್ರಮ ಮದ್ಯ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದರು ಎಂದು ಮಂಗಲಿಕ್ ಹೇಳಿದರು. 

ಆರೋಪಿಯ ವಿರುದ್ಧ ಐಪಿಸಿ, ಅಬಕಾರಿ ಕಾಯ್ದೆ ಮತ್ತು ಗ್ಯಾಂಗ್‌ಸ್ಟರ್ ಕಾಯ್ದೆಯ ಸೆಕ್ಷನ್ 419 (ವಂಚನೆಗೆ ಶಿಕ್ಷೆ), 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರೇರೇಪಿಸುವುದು), 468 (ವಂಚನೆಗಾಗಿ ನಕಲಿ ಮಾಡುವುದು), 471 (ನಕಲಿ ದಾಖಲೆ ಅಥವಾ ಎಲೆಕ್ಟ್ರಾನಿಕ್ ದಾಖಲೆಯನ್ನು ನಿಜವಾದ ದಾಖಲೆಯಾಗಿ ಬಳಸುವುದು), 272 (ಮಾರಾಟಕ್ಕೆ ಉದ್ದೇಶಿಸಲಾದ ಆಹಾರ ಅಥವಾ ಪಾನೀಯವನ್ನು ಕಲಬೆರಕೆ ಮಾಡುವುದು), 273 (ಹಾನಿಕಾರಕ ಆಹಾರ ಅಥವಾ ಪಾನೀಯವನ್ನು ಮಾರಾಟ ಮಾಡುವುದು) ಮತ್ತು 207 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News