×
Ad

ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿದ್ದರೂ ಮೋದಿ ಸರಕಾರದಿಂದ ಜನರ ಲೂಟಿ: ಖರ್ಗೆ

Update: 2024-01-04 22:11 IST

ಮಲ್ಲಿಕಾರ್ಜುನ ಖರ್ಗೆ | Photo: PTI 

ಹೊಸದಿಲ್ಲಿ: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿದೆ. ಆದರೆ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಮಾತ್ರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ‘xನ ಪೋಸ್ಟ್ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಖರ್ಗೆ, ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಳೆದ 19 ತಿಂಗಳಿಂದ ಶೇ. 31ಕ್ಕೆ ಇಳಿಕೆಯಾಗಿದೆ. ಆದರೆ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಯಾವುದೇ ರೀತಿಯ ಇಳಿಕೆಯಾಗಿಲ್ಲ ಎಂದರು.

‘‘ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿದೆ. ಆದರೆ, ಮೋದಿ ಸರಕಾರದ ಲೂಟಿ ಮಾಡುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಮೋದಿ ಸಂಪುಟದ ಸಚಿವರು ಬೆಲೆ ಇಳಿಕೆ ಕುರಿತು ತೈಲ ಕಂಪೆನಿಗಳೊಂದಿಗೆ ಮಾತುಕತೆ ನಡೆಸಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ತೈಲ ಕಂಪೆನಿಗಳು ಪ್ರತಿ ಲೀಟರ್ ಪೆಟ್ರೋಲ್ ನಿಂದ 8ರಿಂದ 10 ರೂ. ಹಾಗೂ ಪ್ರತಿ ಲೀಟರ್ ಡೀಸಲ್ ನಿಂದ 3ರಿಂದ 4 ರೂ. ಲಾಭ ಗಳಿಸುತ್ತಿವೆ’’ ಎಂದು ಅವರು ಪೋಸ್ಟ್ ನಲ್ಲಿ ಹೇಳಿದ್ದಾರೆ.

ಕಳೆದ 50 ವರ್ಷಗಳಲ್ಲಿ ಸಾರ್ವಜನಿಕರ ಉಳಿತಾಯ ಖಾತೆಯು ಅತಿ ಕಡಿಮೆಗೆ ಇಳಿದಿರುವುದನ್ನು ದೇಶ ನೋಡುತ್ತಿದೆ. ಬಿಜೆಪಿ ‘‘ಅಚ್ಛೇ ದಿನ್’’ ಸುಳ್ಳು ಭಾಷಣ ಹಾಗೂ ಜಾಹೀರಾತುಗಳಲ್ಲಿ ಮಾತ್ರ ರಾರಾಜಿಸುತ್ತಿದೆ ಎಂದು ಖರ್ಗೆ ಹೇಳಿದ್ದಾರೆ. 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News