ಬಿಹಾರ ಮತದಾರರ ಪಟ್ಟಿಗೆ ಮರುಸೇರ್ಪಡೆಗೆ ಆಧಾರ್ ಮಾನ್ಯ ದಾಖಲೆ ಎಂಬ ಸುಪ್ರೀಂಕೋರ್ಟ್ ಆದೇಶವನ್ನು ತಪ್ಪಾಗಿ ವ್ಯಾಖ್ಯಾನಿಸಿದ ಬಿಜೆಪಿಯ ಅಮಿತ್ ಮಾಳವೀಯ!
ನ್ಯಾಯಾಲಯದ ಆದೇಶದಲ್ಲಿ ನಿಜವಾಗಿ ಏನಿದೆ?
ಅಮಿತ್ ಮಾಳವೀಯ / ಸುಪ್ರೀಂಕೋರ್ಟ್ (PTI)
ಹೊಸದಿಲ್ಲಿ : ಬಿಹಾರದಲ್ಲಿ ಸುಮಾರು 65 ಲಕ್ಷ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿರುವ ವಿಚಾರವು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ.
ಈ ಬೃಹತ್ ಸಂಖ್ಯೆಯ ಮತದಾರರ ಹಕ್ಕು ಕಸಿದುಕೊಳ್ಳುವ ಪ್ರಕ್ರಿಯೆಯ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿದ್ದರೆ, ಆಡಳಿತಾರೂಢ ಬಿಜೆಪಿ ಇದು ನಕಲಿ ಮತದಾರರನ್ನು ತೆಗೆದುಹಾಕುವ ಶುದ್ಧೀಕರಣ ಪ್ರಕ್ರಿಯೆ ಎಂದು ವಾದಿಸುತ್ತಿದೆ.
ಈ ವಿವಾದದ ಕೇಂದ್ರಬಿಂದುವಾಗಿರುವುದು ಸುಪ್ರೀಂ ಕೋರ್ಟ್ ನ ಇತ್ತೀಚಿನ ಆದೇಶ. ಈ ಆದೇಶವನ್ನು ಉಲ್ಲೇಖಿಸಿ, ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ, "ಮತದಾರರ ಪಟ್ಟಿಗೆ ಮರುಸೇರ್ಪಡೆಗೊಳ್ಳಲು ಆಧಾರ್ ಕಾರ್ಡ್ ಒಂದೇ ಸಾಕು ಎಂದು ಸುಪ್ರೀಂ ಕೋರ್ಟ್ ಹೇಳಿಲ್ಲ" ಎಂದು ಪ್ರತಿಪಾದಿಸಿದ್ದಾರೆ. ಸುಪ್ರೀಂ ಕೋರ್ಟ್ ನಿಜವಾಗಿಯೂ ಆಧಾರ್ ಅನ್ನು ಏಕೈಕ ದಾಖಲೆಯಾಗಿ ತಿರಸ್ಕರಿಸಿದೆಯೇ? ನ್ಯಾಯಾಲಯದ ಆದೇಶದಲ್ಲಿ ನಿಜವಾಗಿ ಏನಿದೆ?
ಬಿಜೆಪಿಯ ವಾದವೇನು?
ರವಿವಾರದಂದು, ಅಮಿತ್ ಮಾಳವಿಯಾ ಅವರು ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ವಿರೋಧ ಪಕ್ಷಗಳು "ಸುಳ್ಳು ಪ್ರಚಾರ" ಮಾಡುತ್ತಿವೆ ಎಂದು ಆರೋಪಿಸಿದ್ದರು.
ಮತದಾರರ ಹಕ್ಕು ಪಡೆಯಲು "ಆಧಾರ್ ಒಂದೇ ಮಾನ್ಯ ದಾಖಲೆ ಎಂದು ಸುಪ್ರೀಂ ಕೋರ್ಟ್ ಹೇಳಿಲ್ಲ" ಎಂದು ಮಾಳವೀಯ ಸ್ಪಷ್ಟವಾಗಿ ಹೇಳಿದ್ದಾರೆ. ಆಧಾರ್ ಕೇವಲ ಗುರುತು ಮತ್ತು ನಿವಾಸದ ಪುರಾವೆಯಾಗಿದೆ, ಅದು ಪೌರತ್ವವನ್ನು ಸ್ಥಾಪಿಸುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ 65 ಲಕ್ಷ ಹೆಸರುಗಳ ಪೈಕಿ ಕೇವಲ 84,305 ಆಕ್ಷೇಪಣೆಗಳು ಸಲ್ಲಿಕೆಯಾಗಿರುವುದನ್ನು ಉಲ್ಲೇಖಿಸಿದ ಅವರು, ಇದು "ತೆಗೆದುಹಾಕಲಾದ ಹೆಸರುಗಳು ನಕಲಿ, ಸತ್ತವರು ಮತ್ತು ಬಾಂಗ್ಲಾದೇಶಿ ಹಾಗೂ ರೋಹಿಂಗ್ಯಾಗಳದ್ದಾಗಿತ್ತು" ಎಂಬುದನ್ನು ಸೂಚಿಸುತ್ತದೆ ಎಂದು ವಾದಿಸಿದ್ದಾರೆ.
ವಿರೋಧ ಪಕ್ಷಗಳ "ವೋಟ್ ಚೋರಿ" ಎಂಬ ಕೂಗು ಕೇವಲ ಕಟ್ಟುಕಥೆ ಎಂದು ಅವರು ಹೇಳಿದ್ದಾರೆ.ಈ ಹೇಳಿಕೆಗಳ ಮೂಲಕ, ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಿದ ಪ್ರಕ್ರಿಯೆಯು ನ್ಯಾಯಸಮ್ಮತವಾಗಿತ್ತು
ಮತ್ತು ವಿರೋಧ ಪಕ್ಷಗಳು ಅನಗತ್ಯವಾಗಿ ಗದ್ದಲ ಎಬ್ಬಿಸುತ್ತಿವೆ ಎಂಬ ಚಿತ್ರಣವನ್ನು ನೀಡಲು ಮಾಳವಿಯಾ ಪ್ರಯತ್ನಿಸಿದರು.
ಸುಪ್ರೀಂ ಕೋರ್ಟ್ ಆದೇಶದ ಸತ್ಯಾಂಶವೇನು?
ಆದರೆ, ಸುಪ್ರೀಂ ಕೋರ್ಟ್ ನ ಆಗಸ್ಟ್ 22, 2025ರ ಆದೇಶವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಮಾಳವಿಯಾ ಅವರ ವಾದಕ್ಕೆ ವಿರುದ್ಧವಾದ ಚಿತ್ರಣ ಅಲ್ಲಿದೆ . ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು, ಮತದಾರರ ಪಟ್ಟಿಯಿಂದ ಹೊರಗುಳಿದಿರುವ 65 ಲಕ್ಷ ಜನರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಹಲವು ನಿರ್ದೇಶನಗಳನ್ನು ನೀಡಿತ್ತು.
ಸೆಪ್ಟೆಂಬರ್ 1, 2025 ರ ಗಡುವಿನೊಳಗೆ ಪ್ರತಿಯೊಬ್ಬ ಅರ್ಹ ಮತದಾರನೂ ತನ್ನ ಹಕ್ಕು ಅಥವಾ ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶ ನೀಡಬೇಕು ಎಂಬುದೇ ನ್ಯಾಯಾಲಯದ ಪ್ರಮುಖ ಕಾಳಜಿಯಾಗಿತ್ತು.
ಆದೇಶದ ಪ್ಯಾರಾಗ್ರಾಫ್ 9 ರಲ್ಲಿರುವ ಒಂದು ನಿರ್ದಿಷ್ಟ ವಾಕ್ಯವು ಈ ವಿವಾದದ ಕೇಂದ್ರಬಿಂದುವಾಗಿದೆ. ನ್ಯಾಯಾಲಯವು 12 ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ತಮ್ಮ ಬೂತ್ ಮಟ್ಟದ ಏಜೆಂಟರಿಗೆ ಮತದಾರರಿಗೆ ಸಹಾಯ ಮಾಡಲು ಸೂಚಿಸುವಂತೆ ನಿರ್ದೇಶನ ನೀಡಿತು.
ಆ ನಿರ್ಣಾಯಕ ವಾಕ್ಯ ಹೀಗಿದೆ: "...ತಮ್ಮ ತಮ್ಮ ಬೂತ್ ಮಟ್ಟದ ಏಜೆಂಟರಿಗೆ ಅಂದ್ರೆ BLA ಗಳಿಗೆ ತಮ್ಮ ಗ್ರಾಮ/ಬ್ಲಾಕ್/ಕ್ಷೇತ್ರ/ಪಂಚಾಯತ್ ಪ್ರದೇಶ ಹಾಗೂ ಪರಿಹಾರ ಶಿಬಿರಗಳಲ್ಲಿರುವ ಮತದಾರರಿಗೆ ಅಗತ್ಯ ನಮೂನೆಗಳನ್ನು ಸಲ್ಲಿಸಲು ಸಹಾಯ ಮಾಡುವಂತೆ ನಿರ್ದಿಷ್ಟ ಸೂಚನೆಗಳನ್ನು ನೀಡಬೇಕು. ಈ ನಮೂನೆಗಳ ಜೊತೆಗೆ ಎಸ್ಐಆರ್ ಅಧಿಸೂಚನೆಯಲ್ಲಿ ಉಲ್ಲೇಖಿಸಲಾದ 11 ದಾಖಲೆಗಳಲ್ಲಿ ಯಾವುದಾದರೂ ಒಂದು ಅಥವಾ ಆಧಾರ್ ಕಾರ್ಡ್ ಅನ್ನು ಸಲ್ಲಿಸಬಹುದು."
ಈ ವಾಕ್ಯದಲ್ಲಿರುವ "ಅಥವಾ" (or) ಎಂಬ ಪದವು ಅತ್ಯಂತ ಮಹತ್ವದ್ದಾಗಿದೆ. ಇದು "ಎಸ್ಐಆರ್ ಅಧಿಸೂಚನೆಯಲ್ಲಿ ಉಲ್ಲೇಖಿಸಲಾದ 11 ದಾಖಲೆಗಳು" ಮತ್ತು "ಆಧಾರ್ ಕಾರ್ಡ್" ಅನ್ನು ಎರಡು ಪ್ರತ್ಯೇಕ ಮತ್ತು ಪರ್ಯಾಯ ಆಯ್ಕೆಗಳಾಗಿ ಸ್ಪಷ್ಟವಾಗಿ ಪ್ರಸ್ತುತಪಡಿಸುತ್ತದೆ. ಅಂದರೆ, ಒಬ್ಬ ಮತದಾರನು ತನ್ನ ಅರ್ಜಿಯೊಂದಿಗೆ ಆ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ನೀಡಬಹುದು, ಅಥವಾ ಕೇವಲ ತನ್ನ ಆಧಾರ್ ಕಾರ್ಡ್ ಅನ್ನು ಸಹ ನೀಡಬಹುದು.
ಇದು ಅಮಿತ್ ಮಾಳವಿಯಾ ಅವರ "ಆಧಾರ್ ಒಂದೇ ಸಾಕು ಎಂದು ಕೋರ್ಟ್ ಹೇಳಿಲ್ಲ" ಎಂಬ ವಾದವನ್ನು ನೇರವಾಗಿ ಅಲ್ಲಗಳೆಯುತ್ತದೆ.
ನ್ಯಾಯಾಲಯದ ಆದೇಶವು ಮತದಾರರಿಗೆ ಎರಡು ಆಯ್ಕೆಗಳನ್ನು ನೀಡಿದೆಯೇ ಹೊರತು, ಆಧಾರ್ ಅನ್ನು ಇತರ ದಾಖಲೆಗಳ ಜೊತೆಗೆ ಕಡ್ಡಾಯವಾಗಿ ನೀಡಬೇಕು ಎಂದು ಹೇಳಿಲ್ಲ.
ಇನ್ನು, ಕಡಿಮೆ ಸಂಖ್ಯೆಯ ಆಕ್ಷೇಪಣೆಗಳು ಸಲ್ಲಿಕೆಯಾಗಿರುವುದನ್ನು ಮಾಳವಿಯಾ ಅವರು "ಶುದ್ಧ ಮತದಾರರ ಪಟ್ಟಿ"ಗೆ ಸಾಕ್ಷಿ ಎಂದು ಬಣ್ಣಿಸಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು.
ರಾಜಕೀಯ ಪಕ್ಷಗಳು ನೇಮಿಸಿದ 1,60,813 ಬೂತ್ ಮಟ್ಟದ ಏಜೆಂಟರುಗಳ ಪೈಕಿ ಕೇವಲ ಎರಡು ಆಕ್ಷೇಪಣೆಗಳು ಮಾತ್ರ ಸಲ್ಲಿಕೆಯಾಗಿರುವುದನ್ನು ಕಂಡು ನ್ಯಾಯಾಲಯವೇ ಆಶ್ಚರ್ಯಚಕಿತವಾಗಿತ್ತು. ಕೆಲವು ರಾಜಕೀಯ ಪಕ್ಷಗಳು ತಮ್ಮ BLA ಗಳಿಗೆ "ಆಕ್ಷೇಪಣೆಗಳನ್ನು ಸಲ್ಲಿಸಲು ಅನುಮತಿ ನೀಡಲಾಗುತ್ತಿಲ್ಲ" ಎಂದು ದೂರಿದ್ದನ್ನೂ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತ್ತು.
ನ್ಯಾಯಾಲಯದ ಪ್ರತಿಕ್ರಿಯೆಯು ಕರಡು ಪಟ್ಟಿಯನ್ನು ಅನುಮೋದಿಸುವುದಾಗಿರಲಿಲ್ಲ, ಬದಲಾಗಿ ಯಾವುದೇ ಅರ್ಹ ಪ್ರಜೆ ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕೆಲವು ಪೂರ್ವಭಾವಿ ನಿರ್ದೇಶನಗಳನ್ನು ನೀಡಿತ್ತು.
ಬಿಹಾರದ 12 ಮಾನ್ಯತೆ ಪಡೆದ ರಾಜಕೀಯ ಪಕ್ಷಗಳನ್ನು ಈ ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಸೇರಿಸಿಕೊಳ್ಳಬೇಕು.ಈ ಪಕ್ಷಗಳು ತಮ್ಮ BLA ಗಳ ಮೂಲಕ 65 ಲಕ್ಷ ಜನರಿಗೆ ಸಹಾಯ ಮಾಡಲು ತಕ್ಷಣವೇ ಸೂಚನೆಗಳನ್ನು ನೀಡಬೇಕು.ವ್ಯಕ್ತಿಗಳು ಭೌತಿಕ ನಮೂನೆಗಳನ್ನು ಸಲ್ಲಿಸುವ ಅಗತ್ಯವಿಲ್ಲದೆ, ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು.
ಬಿಹಾರದ ಮುಖ್ಯ ಚುನಾವಣಾಧಿಕಾರಿ ಈ 12 ಪಕ್ಷಗಳ ರಾಜ್ಯಾಧ್ಯಕ್ಷರಿಗೆ ಔಪಚಾರಿಕವಾಗಿ ನೋಟಿಸ್ ನೀಡಿ, ಮುಂದಿನ ವಿಚಾರಣೆಗೆ ಸ್ಥಿತಿಗತಿ ವರದಿಯೊಂದಿಗೆ ಹಾಜರಾಗುವಂತೆ ಸೂಚಿಸಬೇಕು ಎಂಬ ನಿರ್ದೇಶನಗಳನ್ನು ಕೋರ್ಟ್ ನೀಡಿತ್ತು.
ಅಂದರೆ , ಮತದಾರರ ಪಟ್ಟಿಗೆ ಮರುಸೇರ್ಪಡೆಗಾಗಿ ಸಲ್ಲಿಸುವ ಅರ್ಜಿಗಳೊಂದಿಗೆ ಆಧಾರ್ ಕಾರ್ಡ್ ಅನ್ನು ಏಕೈಕ ದಾಖಲೆಯಾಗಿ ಬಳಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿಲ್ಲ ಎಂಬ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಅವರ ಹೇಳಿಕೆಯು ನ್ಯಾಯಾಲಯದ ಆದೇಶದ ತಪ್ಪಾದ ವ್ಯಾಖ್ಯಾನವಾಗಿದೆ.
ಸುಪ್ರೀಂ ಕೋರ್ಟ್ ನ ಆದೇಶದ ಒಕ್ಕಣೆಯು "11 ದಾಖಲೆಗಳು ಅಥವಾ ಆಧಾರ್ ಕಾರ್ಡ್" ಎಂದು ಸ್ಪಷ್ಟವಾಗಿ ನಮೂದಿಸುವ ಮೂಲಕ, ಆಧಾರ್ ಅನ್ನು ಒಂದು ಸ್ವತಂತ್ರ ಮತ್ತು ಮಾನ್ಯ ಪರ್ಯಾಯ ದಾಖಲೆಯಾಗಿ ಪರಿಗಣಿಸಿದೆ. ಇದಲ್ಲದೆ, ಕಡಿಮೆ ಸಂಖ್ಯೆಯ ಆಕ್ಷೇಪಣೆಗಳ ಬಗ್ಗೆ ನ್ಯಾಯಾಲಯವು ವ್ಯಕ್ತಪಡಿಸಿದ ಕಳವಳ ಮತ್ತು ಎಲ್ಲಾ ರಾಜಕೀಯ ಪಕ್ಷಗಳಿಗೆ ಸಕ್ರಿಯವಾಗಿ ಪಾಲ್ಗೊಳ್ಳಲು ನೀಡಿದ ನಿರ್ದೇಶನಗಳು, ಪ್ರಕ್ರಿಯೆಯ ಬಗ್ಗೆ ನ್ಯಾಯಾಲಯಕ್ಕಿದ್ದ ಗಂಭೀರ ಕಾಳಜಿಯನ್ನು ತೋರಿಸುತ್ತವೆ. ಮಾಳವಿಯಾ ಅವರ ಹೇಳಿಕೆಯಲ್ಲಿ ಈ ಸೂಕ್ಷ್ಮತೆಯು ಸಂಪೂರ್ಣವಾಗಿ ಕಾಣೆಯಾಗಿದೆ.
ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಅತ್ಯಂತ ಪವಿತ್ರವಾದದ್ದು. ಲಕ್ಷಾಂತರ ಜನರ ಹಕ್ಕುಗಳು ಅಪಾಯದಲ್ಲಿರುವಾಗ, ನ್ಯಾಯಾಲಯದ ಆದೇಶಗಳನ್ನು ನಿಖರವಾಗಿ ಅರ್ಥೈಸಿಕೊಂಡು ಜವಾಬ್ದಾರಿಯುತವಾಗಿ ವರ್ತಿಸುವುದು ಅತ್ಯಗತ್ಯ. ಈ ಪ್ರಕರಣದಲ್ಲಿ, ರಾಜಕೀಯ ಹೇಳಿಕೆ ಮತ್ತು ನ್ಯಾಯಾಂಗದ ಆದೇಶದ ವಾಸ್ತವದ ನಡುವೆ ಸ್ಪಷ್ಟವಾದ ಅಂತರವಿರುವುದು ಕಂಡುಬರುತ್ತದೆ.