ಮಹಾರಾಷ್ಟ್ರ | ಹೂಡಿಕೆ ಹಿಂಪಡೆಯುವಲ್ಲಿ ವಿಫಲ: ಸಹಕಾರ ಬ್ಯಾಂಕ್ ಹೊರಗೇ ನೇಣು ಬಿಗಿದುಕೊಂಡು ರೈತನ ಆತ್ಮಹತ್ಯೆ
ಛತ್ರಪತಿ ಸಂಭಾಜಿನಗರ: ಸಹಕಾರ ಸಂಘವೊಂದು ತನ್ನ ನಿಶ್ಚಿತ ಠೇವಣಿಯನ್ನು ಮರಳಿಸಲು ವಿಫಲಗೊಂಡಿದ್ದರಿಂದ ಹತಾಶಗೊಂಡ 46 ವರ್ಷದ ರೈತರೊಬ್ಬರು, ಆ ಸಹಕಾರ ಸಂಘಟನೆಯೆದುರೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಯೋರೈ ತಾಲ್ಲೂಕಿನ ಖಾಲೇಗಾಂವ್ ನಿವಾಸಿ ಸುರೇಶ್ ಜಾಧವ್ ಮೃತ ರೈತ ಎಂದು ಗುರುತಿಸಲಾಗಿದ್ದು, ಅವರ ಪುತ್ರಿಯ ಪ್ರಕಾರ, ನನ್ನ ಹಾಗೂ ನನ್ನ ತಮ್ಮನ ಭವಿಷ್ಯದ ಶೈಕ್ಷಣಿಕ ವೆಚ್ಚಕ್ಕಾಗಿ ನನ್ನ ತಂದೆ ನಮ್ಮ ಕುಟುಂಬದ ಜಮೀನನ್ನು ಮಾರಿದ್ದರು ಎಂದು ತಿಳಿಸಿದ್ದಾರೆ.
ಬುಧವಾರ ಮುಂಜಾನೆ ಜೆವ್ರಾಯಿ ಪಟ್ಟಣದಲ್ಲಿನ ಛತ್ರಪತಿ ಮಲ್ಟಿಸ್ಟೇಟ್ ಕೋ-ಆಪರೇಟಿವ್ ಸಂಘದ ಎದುರಿನ ಕಬ್ಬಿಣದ ತುಂಡಿಗೆ ನೇಣು ಬಿಗಿದುಕೊಂಡು ಸುರೇಶ್ ಜಾಧವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ, ಸಹಕಾರ ಸಂಘದ ಮಾಜಿ ಅಧ್ಯಕ್ಷ ಸಂತೋಷ್ ಭಂಡಾರಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.