ಕೇರಳ ಸಿಎಂ ನಿವಾಸಕ್ಕೆ ಹುಸಿ ಬಾಂಬ್ ಬೆದರಿಕೆ
ಪಿಣರಾಯಿ ವಿಜಯನ್ | PC : PTI
ತಿರುವನಂತಪುರ,ಜು.13: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧಿಕೃತ ನಿವಾಸ ‘ಕ್ಲಿಫ್ ಹೌಸ್’ಗೆ ರವಿವಾರ ಬಾಂಬ್ ಬೆದರಿಕೆ ಬಂದಿದ್ದು,ತನಿಖೆಯ ಬಳಿಕ ಇದೊಂದು ಹುಸಿ ಬೆದರಿಕೆ ಎನ್ನುವುದು ದೃಢಪಟ್ಟಿದೆ ಎಂದು ಪೋಲಿಸರು ತಿಳಿಸಿದರು.
ಥಂಪನೂರ್ ಪೋಲಿಸ್ ಠಾಣೆಗೆ ಇ-ಮೇಲ್ ಮೂಲಕ ಬೆದರಿಕೆ ಬಂದಿದ್ದು,ಅದರ ಮೂಲವನ್ನು ಇನ್ನಷ್ಟೇ ಗುರುತಿಸಬೇಕಿದೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದರು.
ಕ್ಲಿಫ್ ಹೌಸ್ ನಲ್ಲಿ ಬಾಂಬ್ ಸ್ಫೋಟಗಳು ಸಂಭವಿಸಲಿವೆ ಎಂದು ಇ-ಮೇಲ್‌ನಲ್ಲಿ ತಿಳಿಸಲಾಗಿತ್ತು. ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳಗಳೊಂದಿಗೆ ಸಮಗ್ರ ಶೋಧ ಕಾರ್ಯಾಚರಣೆ ನಡೆಸಲಾಗಿತ್ತಾದರೂ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದರು.
ಶೋಧ ಕಾರ್ಯಾಚರಣೆ ಸಂದರ್ಭ ವಿಜಯನ್ ಮತ್ತು ಅವರ ಕುಟುಂಬ ವಿದೇಶದಲ್ಲಿದ್ದರು.
ಇತ್ತೀಚಿಗೆ ರಾಜ್ಯದಲ್ಲಿಯ ಪ್ರಮುಖ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಬಂದಿದ್ದ ಸರಣಿ ಬಾಂಬ್ ಬೆದರಿಕೆಗಳಿಗೂ ಈ ಬೆದರಿಕೆಗೂ ಸಂಬಂಧವಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ತನಿಖೆಯು ಪ್ರಗತಿಯಲ್ಲಿದೆ.