ಮುಂಬೈ ಮಹಾನಗರದಲ್ಲೂ ಭಾರಿ ಅನಾಹುತ ಸೃಷ್ಟಿಸಿದ ಮಳೆ; ಕೊಂಕಣ ರೈಲು ಸಂಚಾರ ಅಸ್ತವ್ಯಸ್ತ
PC | ndtv.com
ಮುಂಬೈ: ಮುಂಬೈ ಮತ್ತು ಪುಣೆ ಸೇರಿದಂತೆ ಮಹಾರಾಷ್ಟ್ರದ ವಿವಿಧೆಡೆಗಳಲ್ಲಿ ಅಕಾಲಿಕ ಮಳೆ ಹಾಗೂ ರಭಸದ ಗಾಳಿ, ಗುಡುಗು ಮಿಂಚು ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಬೇಸಿಗೆಯ ಬೇಗೆಗೆ ಮಳೆ ತಂಪೆರೆದಿದ್ದರೂ, ಪ್ರಮುಖ ರಸ್ತೆಗಳು ಜಲಾವೃತವಾಗಿರುವುದರಿಂದ ಸುಗಮ ಸಂಚಾರ ವ್ಯವಸ್ಥೆಗೆ ಅಡಚಣೆ ಉಂಟಾಗಿದೆ.
ಹವಾಮಾನ ಇಲಾಖೆ ಬುಧವಾರದಿಂದ ಮುಂದಿನ ನಾಲ್ಕು ದಿನಗಳವರೆಗೂ ರಾಜ್ಯದಲ್ಲಿ ಮಳೆ ಸಾಧ್ಯತೆಯನ್ನು ಅಂದಾಜಿಸಿದ್ದು, ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಿಸಿದೆ.
ಮಂಗಳವಾರ ಸಂಜೆ ಮುಂಬೈನ ಪೊವಾಯಿ ಪ್ರದೇಶದಲ್ಲಿ ದಿಢೀರನೇ ರಭಸದ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಜಲವಾಯು ಕಾಂಪ್ಲೆಕ್ಸ್ ಸಮೀಪ ಮರ ಬಿದ್ದು ಸಂಭವಿಸಿದ ದುರಂತ ಆತಂಕ ಸೃಷ್ಟಿಸಿದ್ದು, ಪ್ರಯಾಣಿಕರು ಪರ್ಯಾಯ ಮಾರ್ಗವನ್ನು ಬಳಸುವಂತೆ ಆಡಳಿತ ಯಂತ್ರ ಕರೆ ನೀಡಿದೆ. ಆದರೆ ಈ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಭಾರಿ ಮಳೆಯಿಂದ ಅಂಧೇರಿ ಸುರಂಗಮಾರ್ಗ ಸಂಪೂರ್ಣ ಜಲಾವೃತವಾಗಿದೆ. ಡ್ರೈನೇಜ್ ಯಂತ್ರಗಳ ಮೂಲಕ ನೀರನ್ನು ಹೊರಹಾಕುವ ನಿಟ್ಟಿನಲ್ಲಿ ಬಿಎಂಸಿ ತಂಡ ಅಹೋರಾತ್ರಿ ಶ್ರಮಿಸುತ್ತಿದೆ.
ಪುಣೆ ವಿಮಾನ ನಿಲ್ದಾಣದ ಬಳಿ ಕೂಡಾ ಇಂಥದ್ದೇ ಪರಿಸ್ಥಿತಿ ಸೃಷ್ಟಿಯಾಗಿದೆ. ಬೀದಿಗಳಲ್ಲಿ ಚರಂಡಿ ನೀರು ಪ್ರವಾಹದೋಪಾದಿಯಲ್ಲಿ ಹರಿಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಪರಿಸ್ಥಿತಿ ಹಿನ್ನೆಲೆಯಲ್ಲಿ ವಿಮಾನಗಳ ಸಂಚಾರ ವ್ಯತ್ಯಯವಾಗಬಹುದು ಎಂದು ಸ್ಪೈಸ್ ಜೆಟ್ ಮುನ್ನೆಚ್ಚರಿಕೆ ನೀಡಿದೆ.
ಥಾಣೆ ಜಿಲ್ಲೆಯ ಮಿರಾ-ಭಯಾಂದರ್ ಪ್ರದೇಶದಲ್ಲೂ ರಾತ್ರಿ 7.30ರ ಸುಮಾರಿಗೆ ಮಳೆ ಆರಂಭವಾಗಿದ್ದು, ಮಿಂಚು ಹಾಗೂ ಸಿಡಿಲಿನಿಂದ ಜನ ಭಯಭೀತರಾಘಿದ್ದಾರೆ. ಮಹೇಶ್ವರಿ ಭವನದ ಪಕ್ಕ ಭಾರಿ ಮಿಂಚು ಗೋಚರಿಸಿದೆ. ಭೂಕುಸಿತದಿಂದಾಗಿ ಕೊಂಕಣರೈಲ್ವೆ ಮಾರ್ಗದಲ್ಲಿ ಸಂಚಾರ ರತ್ನಗಿರಿ ಜಿಲ್ಲೆಯ ವೆರ್ವಲಿ ಮತ್ತು ವಿಲವಾಡೆ ನಡುವೆ ಅಲ್ಪಕಾಲ ಸ್ಥಗಿತಗೊಂಡಿತ್ತು. ಸಂಜೆ 6.30ರ ಸುಮಾರಿಗೆ ರೈಲು ಹಳಿಯ ಮೇಲೆ ಗುಂಡು ಕಲ್ಲುಗಳು ಕುಸಿದು ಸಂಚಾರಕ್ಕೆ ತಡೆ ಉಂಟಾಯಿತು ಎಂದು ರೈಲ್ವೆ ವಕ್ತಾರರು ಹೇಳಿದ್ದಾರೆ. ಇದರಿಂದ ಗೋವಾ ಹಾಗೂ ಕರ್ನಾಟಕಕ್ಕೆ ಸಂಚರಿಸುವ ರೈಲುಗಳು ವಿಳಂಬವಾಗಿವೆ.
ಮುಂಬೈ- ತಿರುವನಂತಪುರ ನಡುವೆ ಸಂಚರಿಸುವ ನೇತ್ರಾವತಿ ಎಕ್ಸ್‍ಪ್ರೆಸ್ ರತ್ನಗಿರಿ ನಿಲ್ದಾಣದಲ್ಲಿ ನಿಲುಗಡೆಯಾಗಿದೆ. ಮುಂಬೈಗೆ ತೆರಳುವ ಜನ ಶತಾಬ್ದಿ ಎಕ್ಸ್‍ಪ್ರೆಸ್ ವೈಭವವಾಡಿ ನಿಲ್ದಾಣದಲ್ಲಿ ನಿಂತಿದೆ. ತೇಜಸ್ ಎಕ್ಸ್‍ಪ್ರೆಸ್ ಕಂಕವ್ಲಿ ನಿಲ್ದಾಣದಲ್ಲಿ ಸ್ಥಗಿತಗೊಂಡಿದೆ.