×
Ad

ಉತ್ತರ ಪ್ರದೇಶದಲ್ಲಿ ರೈತನ ಥಳಿಸಿ ಹತ್ಯೆ

Update: 2024-12-26 22:57 IST

ಸಾಂದರ್ಭಿಕ ಚಿತ್ರ | PC : PTI

ಬರೇಲಿ: ಹಳೆಯ ಭೂವಿವಾದಕ್ಕೆ ಸಂಬಂಧಿಸಿ 45 ವರ್ಷದ ರೈತರೋರ್ವರನ್ನು ಥಳಿಸಿ ಹತ್ಯೆಗೈದ ಘಟನೆ ಇಲ್ಲಿನ ಫತೇಹ್‌ಗಂಜ್‌ನಲ್ಲಿ ಸಂಭವಿಸಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ವಿಂಡಿಯಾ ಖುರ್ದ್ ಗ್ರಾಮದ ನಿವಾಸಿ ಅಹಿಲ್ಕರ್ ಬುಧವಾರ ರಾತ್ರಿ ಹೊಲದಲ್ಲಿರುವ ತನ್ನ ಪುತ್ರನಿಗೆ ಊಟ ಕೊಂಡೊಯ್ಯುತ್ತಿರುವ ಸಂದರ್ಭ ಈ ಘಟನೆ ನಡೆದಿದೆ ಎಂದು ಫತೇಹ್‌ಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್ ಹೇಳಿದ್ದಾರೆ.

ಅಹಿಲ್ಕರ್ ಊಟ ತೆಗೆದುಕೊಂಡು ಹೋಗುತ್ತಿರುವ ಸಂದರ್ಭ ಕೆಲವು ಗ್ರಾಮಸ್ಥರು ಅವರನ್ನು ನಿಲ್ಲಿಸಿದರು. ಅವರನ್ನು ನಿಂದಿಸಿದರು. ದೊಣ್ಣೆಯಿಂದ ಥಳಿಸಿದರು. ಅನಂತರ ಹರಿತವಾದ ಆಯುಧಗಳಿಂದ ದಾಳಿ ನಡೆಸಿದರು ಎಂದು ಅವರು ತಿಳಿಸಿದ್ದಾರೆ.

ಗಂಭೀರ ಗಾಯಗೊಂಡ ಅಹಿಲ್ಕರ್ ಅವರನ್ನು ಫರೀದ್‌ಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರ ಶಿಫಾರಸಿನಂತೆ ಬರೇಲಿ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಯಿತು. ಆದರೆ, ಅವರು ಚಿಕಿತ್ಸೆಯ ವೇಳೆ ಮೃತಪಟ್ಟರು.

ಈ ಹತ್ಯೆಗೆ ಹಳೆಯ ಭೂ ವಿವಾದ ಕಾರಣ. ಮೃತಪಟ್ಟ ಅಹಿಲ್ಕರ್ ಅವರ ಕುಟುಂಬದ ಸದಸ್ಯರು ನೀಡಿದ ದೂರಿನ ಆಧಾರದಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News