ಕೊನೆಗೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಪ್ರಖ್ಯಾತ ಗುಮ್ಮಟದೊಳಗೆ ಪ್ರವೇಶಿಸಿದ ಭಾರತೀಯ ಗಗನಯಾತ್ರಿ
Photo : NDTV
ಹೊಸದಿಲ್ಲಿ: ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಕೊನೆಗೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಗುಮ್ಮಟದೊಳಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಅವರು ಹಸನ್ಮುಖರಾಗಿ, ಹೆಮ್ಮೆಯಿಂದ ಬೀಗುತ್ತಿರುವುದು ಕಂಡು ಬಂದಿದೆ.
14 ದಿನಗಳ ಬಾಹ್ಯಾಕಾಶ ಯೋಜನೆಯನ್ವಯ ಜೂನ್ 26ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ್ದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಇದೀಗ ತಮ್ಮ ವೈಜ್ಞಾನಿಕ ಗುರಿಗಳನ್ನು ಮುಕ್ತಾಯಗೊಳಿಸುತ್ತಿದ್ದಾರೆ. ನನಗೆ ಬಾಹ್ಯಾಕಾಶದಿಂದ ಯಾವುದೇ ಗಡಿಗಳು ಕಾಣಿಸುತ್ತಿಲ್ಲ ಎಂದು ಇದಕ್ಕೂ ಮುನ್ನ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದ್ದರು.
ಬಾಹ್ಯಾಕಾಶ ನೌಕೆಯ ಸಿಬ್ಬಂದಿಗಳಾದ ಕಮಾಂಡರ್ ಪೆಗ್ಗಿ ವಿಟ್ಸನಮ್, ಪೈಲಟ್ ಶುಭಾಂಶು ‘ಶಕ್ಸ್’ ಶುಕ್ಲಾ ಹಾಗೂ ಯೋಜನೆಯ ತಜ್ಞ ಸ್ಲ್ಯಾವೋಸ್ಝ್ ‘ಸುಯೇವ್’ ಉಝ್ನಾಸ್ಕಿ-ವಿಸ್ನೀವ್ಸ್ಕಿ ಹಾಗೂ ಟಿಬೋರ್ ಕಾಪು ಇದೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಮ್ಮ ಒಂಭತ್ತು ದಿನಗಳನ್ನು ಮುಕ್ತಾಯಗೊಳಿಸಿದ್ದಾರೆ ಎಂದು ಅಕ್ಷಿಯಮ್ ಸ್ಪೇಸ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಬಾಹ್ಯಾಕಾಶ ನೌಕೆಯ ಈ ಸಿಬ್ಬಂದಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಬಂದಾಗಿನಿಂದ, ವೈಜ್ಞಾನಿಕ ಸಂಶೋಧನೆಯ ಬಿಡುವಿಲ್ಲದ ವೇಳಾಪಟ್ಟಿ, ತಂತ್ರಜ್ಞಾನದ ಪ್ರದರ್ಶನ ಹಾಗೂ ಜಾಗತಿಕ ತಲುಪುವಿಕೆಗೆ ತಮ್ಮ ಸಂಪೂರ್ಣ ಸಮಯವನ್ನು ಮೀಸಲಿಟ್ಟಿದ್ದಾರೆ. ಭವಿಷ್ಯದ ಬಾಹ್ಯಾಕಾಶ ಆವಿಷ್ಕಾರ ಮತ್ತು ಭೂಮಿಯ ಮೇಲಿನ ಜೀವನಕ್ಕೆ ಅನುಕೂಲ ಮಾಡಿಕೊಡುವಂತಹ ಪ್ರಯೋಗಗಳಿಗೆ ಬಾಹ್ಯಾಕಾಶ ನೌಕೆ ಸಿಬ್ಬಂದಿಗಳು ಕೊಡುಗೆ ನೀಡುವ ಮೂಲಕ, ಯೋಜನೆಯ ಉದ್ದೇಶಗಳ ಈಡೇರಿಕೆಯು ಸ್ಥಿರ ಪ್ರಗತಿ ಸಾಧಿಸುತ್ತಿವೆ.