×
Ad

ಸಿಖ್ ಅಧಿಕಾರಿಗೆ ಚಪ್ಪಲಿ ಎಸೆದ ಆರೋಪ: ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷರ ವಿರುದ್ಧ ಎಫ್‌ಐಆರ್ ದಾಖಲು

Update: 2025-06-16 17:09 IST

ಕೋಲ್ಕತಾ: ಸಿಖ್ ಅಧಿಕಾರಿಯೋರ್ವರ ಪೇಟಕ್ಕೆ ಚಪ್ಪಲಿ ಎಸೆದ ಆರೋಪದಲ್ಲಿ ಕೇಂದ್ರ ಸಚಿವ ಹಾಗೂ ಪ.ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಮ್ದಾರ್ ವಿರುದ್ಧ ಕೋಲ್ಕತಾದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ತಿಳಿಸಿದೆ.

ಮಜುಮ್ದಾರ್ ತಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿರುವ ಸಿಖ್ ಗುಂಪುಗಳು ಅವರಿಂದ ಕ್ಷಮಾಯಾಚನೆಗೆ ಆಗ್ರಹಿಸಿವೆ.

ಆದರೆ ಈ ಆರೋಪಗಳನ್ನು ತಿರಸ್ಕರಿಸಿರುವ ಮಜುಮ್ದಾರ್,ತಾನು ಎಸೆದಿದ್ದು ಚಪ್ಪಲಿ ರೂಪದ ಕಾಗದವಷ್ಟೇ ಎಂದು ಹೇಳಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಗುರುವಾರ ದಕ್ಷಿಣ 24 ಪರಗಣಗಳ ಜಿಲ್ಲೆಯ ಹಿಂಸಾಗ್ರಸ್ತ ಮಹೇಸ್ತಲಾಕ್ಕೆ ಭೇಟಿ ನೀಡಲು ತೆರಳುತ್ತಿದ್ದ ಬಿಜೆಪಿ ನಾಯಕರನ್ನು ಪೋಲಿಸರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ನಿವಾಸದ ಬಳಿ ತಡೆದು ವಶಕ್ಕೆ ತೆಗೆದುಕೊಂಡಾಗ ಈ ಘಟನೆ ಸಂಭವಿಸಿತ್ತೆನ್ನಲಾಗಿದೆ.

ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರಗೊಂಡಿತ್ತು.

ಸಿಖ್ ಸಮುದಾಯದ ದೂರಿನ ಮೇರೆಗೆ ಮಜುಮ್ದಾರ್ ವಿರುದ್ಧ ಶುಕ್ರವಾರ ಕಾಳಿಘಾಟ್ ಪೋಲಿಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು,ಅದರ ಪ್ರತಿಯನ್ನು ಟಿಎಂಸಿ ರವಿವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.

ಸಿಖ್ ಸಮುದಾಯವು ತಕ್ಷಣ,ಬೇಷರತ್ ಕ್ಷಮೆ ಯಾಚನೆಗೆ ಆಗ್ರಹಿಸಿದೆ. ತಮ್ಮ ಧ್ವನಿಯನ್ನು ಕಡೆಗಣಿಸಿದರೆ ವ್ಯಾಪಕ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ ಎಂದು ತಿಳಿಸಿರುವ ಟಿಎಂಸಿ,ಬಿಜೆಪಿಯ ದ್ವೇಷ ರಾಜಕಾರಣಕ್ಕೆ ಬಂಗಾಳದಲ್ಲಿ ಅವಕಾಶವಿಲ್ಲ. ಒಬ್ಬರಿಗೆ ಮಾಡಿದ ಅವಮಾನವು ಎಲ್ಲರಿಗೂ ಮಾಡಿರುವ ಅವಮಾನವಾಗಿದೆ ಎಂದು ಹೇಳಿದೆ.

ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮಜುಮ್ದಾರ್,ಅದೊಂದು ಆಕಸ್ಮಿಕ ಘಟನೆಯಾಗಿತ್ತು ಮತ್ತು ‘ಪೇಪರ್ ಕಟ್’ ಯಾರ ತಲೆಯ ಮೇಲೆ ಬಿದ್ದಿತ್ತೋ ಅವರು ತನ್ನ ಭದ್ರತಾ ಸಿಬ್ಬಂದಿಯಾಗಿದ್ದರು ಎಂದು ಹೇಳಿದರು.

ತಾನು ಪೋಲಿಸರತ್ತ ಕಾಗದವನ್ನು ಎಸೆಯಲು ಬಯಸಿದ್ದಾಗಿ ಹೇಳಿದ ಅವರು,ತಲೆಯ ಮೇಲೆ ಚಪ್ಪಲಿ ಆಕಾರದ ಕಾಗದ ಬಿದ್ದವರು ದೂರು ಸಲ್ಲಿಸಿದ್ದಾರೆಯೇ? ಇದನ್ನು ಮಮತಾ ಬ್ಯಾನರ್ಜಿಯವರ ಸೂಚನೆಯ ಮೇರೆಗೆ ಮಾಡಲಾಗುತ್ತಿದೆ. ಅವರು ತುಷ್ಟೀಕರಣ ರಾಜಕೀಯದಲ್ಲಿ ತೊಡಗಿದ್ದಾರೆ ಮತ್ತು ಕೋಮು ರಾಜಕೀಯ ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News