ನೂತನ ಕ್ರಿಮಿನಲ್ ಕಾನೂನು ಜಾರಿ: ದಿಲ್ಲಿಯ ಬೀದಿ ಬದಿ ವ್ಯಾಪಾರಿಯ ವಿರುದ್ಧ ಮೊದಲ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಹೊಸದಿಲ್ಲಿ ರೈಲ್ವೆ ನಿಲ್ದಾಣದ ಬಳಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟುಮಾಡಿದ ಆರೋಪದಲ್ಲಿ ಬೀದಿ ವ್ಯಾಪಾರಿಯೊಬ್ಬರ ವಿರುದ್ಧ ನೂತನ ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ನೂತನ ಕ್ರಿಮಿನಲ್ ಕಾನೂನಿನ ಸೆಕ್ಷನ್ 285ರ ಅಡಿ ದಾಖಲಿಸಿಕೊಳ್ಳಲಾಗಿದೆ.
ನೂತನ ಕ್ರಿಮಿನಲ್ ಕಾನೂನಿನ ಸೆಕ್ಷನ್ 285ರ ಪ್ರಕಾರ, ಯಾವುದೇ ವ್ಯಕ್ತಿ ತನ್ನ ಒಡೆತನದಲ್ಲಿರುವ ಸ್ವತ್ತಿನ ಮೂಲಕ ಸಾರ್ವಜನಿಕ ಸಂಚಾರಕ್ಕೆ ಅಡಚಣೆಯುಂಟು ಮಾಡಿದರೆ ಅಥವಾ ಆ ಸ್ವತ್ತಿನಿಂದ ಸಾರ್ವಜನಿಕರಿಗೆ ಅಪಾಯ ಉಂಟಾಗುವಂತಿದ್ದರೆ, ಅಂತಹ ವ್ಯಕ್ತಿಯನ್ನು ರೂ. 5000ವರೆಗೆ ವಿಸ್ತರಿಸಬಲ್ಲ ದಂಡದೊಂದಿಗೆ ಶಿಕ್ಷಿಸಬಹುದಾಗಿದೆ.
ಕಳೆದ ರಾತ್ರಿ ಪೊಲೀಸ್ ಸಿಬ್ಬಂದಿಗಳು ರಸ್ತೆಯಲ್ಲಿ ಗಸ್ತು ತಿರುಗುವಾಗ, ಓರ್ವ ರಸ್ತೆ ಬದಿ ವ್ಯಾಪಾರಿಯು ರಸ್ತೆಗೆ ಅಡಚಣೆಯುಂಟಾಗುವಂತೆ ರಸ್ತೆಯಲ್ಲಿ ನೀರಿನ ಬಾಟಲಿಗಳ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಆ ವ್ಯಾಪಾರಿಗೆ ಅಲ್ಲಿಂದ ತೆರಳಲು ಮನವಿ ಮಾಡಿದರೂ, ಆತ ಪೊಲೀಸ್ ಸಿಬ್ಬಂದಿಗಳ ಮನವಿಗೆ ಸ್ಪಂದಿಸಿಲ್ಲ. ಹೀಗಾಗಿ ಆತನ ವಿರುದ್ಧ ಸೆಕ್ಷನ್ 285ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಾಗಿರುವ ಬೀದಿ ಬದಿ ಬ್ಯಾಪಾರಿಯನ್ನು ಬಿಹಾರದ ಪಾಟ್ನಾ ನಿವಾಸಿ ಪಂಕಜ್ ಕುಮಾರ್ ಎಂದು ಗುರುತಿಸಲಾಗಿದೆ.
ಮೂರು ನೂತನ ಕ್ರಿಮಿನಲ್ ಕಾನೂನಿನ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮಗಳು ಇಂದಿನಿಂದ ಜಾರಿಗೆ ಬಂದಿವೆ.