×
Ad

ಎ.19ಕ್ಕೆ ಮೊದಲ ಹಂತದ ಲೋಕಸಭಾ ಚುನಾವಣೆ | ದೇಶಾದ್ಯಂತ 102 ಕ್ಷೇತ್ರಗಳಿಗೆ ಮತದಾನ

Update: 2024-04-17 21:09 IST

PC :PTI 

ಹೊಸದಿಲ್ಲಿ : ಲೋಕಸಭೆಗೆ ಮೊದಲ ಹಂತದ ಚುನಾವಣೆಯು ಎಪ್ರಿಲ್ 19ರಂದು ನಡೆಯಲಿದ್ದು, 21 ರಾಜ್ಯಗಳು, ಕೇಂದ್ರಾಡಳಿತಗಳ 102 ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯೊಂದಿಗೆ ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಸ್ಪರ್ಧಿಸುತ್ತಿರುವ ನಾಗಪುರ , ಮೊದಲ ಹಂತದ ಚುನಾವಣೆ ನಡೆಯಲಿರುವ ಪ್ರಮುಖ ಕ್ಷೇತ್ರಗಳಲ್ಲೊಂದಾಗಿದೆ.

ಕೇಂದ್ರ ಸಚಿವ ಕಿರಣ್ ರಿಜಿಜು ಕಣದಲ್ಲಿರುವ ಅರುಣಾಚಲ ಪಶ್ಚಿಮ ಕ್ಷೇತ್ರ, ಕೇಂದ್ರ ಬಂದರು, ಶಿಪ್ಪಿಂಗ್ ಹಾಗೂ ಜಲಸಾರಿಗೆ ಸಚಿವ ಸರ್ಬಾನಂದ ಸೊನೊವಾಲ್ ಅವರು ಸ್ಪರ್ಧಿಸುತ್ತಿರುವ ಅಸ್ಸಾಂನ ದಿಬ್ರೂಘಡದಲ್ಲೂ ಮೊದಲ ಹಂತದ ಚುನಾವಣೆಯಲ್ಲಿ ಮತದಾನ ನಡೆಯಲಿರುವ ಇನ್ನೆರಡು ಪ್ರಮುಖ ಕ್ಷೇತ್ರಗಳಾಗಿವೆ.

ತಮಿಳುನಾಡಿನ ನೀಲಗಿರಿ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಡಿಎಂಕೆ ಸಂಸದ ಎ. ರಾಜಾ ಹಾಗೂ ಬಿಜೆಪಿಯ ಎಲ್. ಮುರುಗನ್ ನಡುವೆ ಜಿದ್ದಾಜಿದ್ದಿಯ ಸ್ಪರ್ಧೆ ನಡೆಯಲಿದೆ.

ಮಧ್ಯಪ್ರದೇಶದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಮುರುಗನ್ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಇದೇ ಮೊದಲ ಸಲವಾಗಿದೆ.

ಶಿವಗಂಗಾ ಸಂಸದ ಕಾರ್ತಿ ಚಿದಂಬರಂ ಅವರು ಶಿವಗಂಗಾ ಕ್ಷೇತ್ರದಲ್ಲಿ ಬಿಜೆಪಿಯ ಟಿ. ದೇವನಾಥನ್ಯಾದವ್ ಹಾಗೂ ಎಡಿಎಂಕೆಯ ಕ್ಸೇವಿಯರ್ ಡೇವಿಸ್ ಅವರನ್ನು ಎದುರಿಸಲಿದ್ದಾರೆ. ಈ ಕ್ಷೇತ್ರವನ್ನು ಕಾರ್ತಿ ಅವರ ತಂದೆ ಪಿ.ಚಿದಂಬರಂ ಅವರು ಏಳು ಬಾರಿ ಪ್ರತಿನಿಧಿಸಿದ್ದರು.

ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಸ್ಪರ್ಧಿಸುತ್ತಿರುವ ಕೊಯಮತ್ತೂರು ದೇಶದ ಗಮನವನ್ನು ಸೆಳೆದಿರುವ ಇನ್ನೊಂದು ಪ್ರಮುಖ ಕ್ಷೇತ್ರವಾಗಿದೆ. ಇಲ್ಲಿ ಅಣ್ಣಾ ಮಲೈ ವಿರುದ್ಧ ಡಿಎಂಕೆ ನಾಯಕ ಗಣಪತಿ ಪಿ. ರಾಜಕುಮಾರ್ ಹಾಗೂ ಎಡಿಎಂಕೆ ಸಂಸದ ಸಿಂಗಾಯ್ ರಾಮಚಂದ್ರನ್ ಸ್ಪರ್ಧಿಸುತ್ತಿದ್ದಾರೆ.

18ನೇ ಲೋಕಸಭಾದ 543 ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 4ರಂದು ಮತಏಣಿಕೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News