ಉತ್ತರ ಪ್ರದೇಶ| ಚಲಿಸುತ್ತಿದ್ದ ಬಸ್ ನಲ್ಲಿ ಬೆಂಕಿ ಅವಘಡ: ಇಬ್ಬರು ಮಕ್ಕಳು ಸೇರಿದಂತೆ ಐವರು ಸಜೀವ ದಹನ
Photo credit: PTI
ಲಕ್ನೊ: ಖಾಸಗಿ ಬಸ್ ಒಂದಕ್ಕೆ ಬೆಂಕಿ ಹತ್ತಿಕೊಂಡ ಪರಿಣಾಮ, ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಐದು ಮಂದಿ ಮೃತಪಟ್ಟಿರುವ ಘಟನೆ ಗುರುವಾರ ಮುಂಜಾನೆ ಲಕ್ನೊದ ಮೋಹನ್‌ಲಾಲ್‌ಗಂಜ್ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಘಟನೆಯು ಮುಂಜಾನೆ 5 ಗಂಟೆಯ ವೇಳೆಗೆ ಲಕ್ನೊ ಹೊರವಲಯದಲ್ಲಿರುವ ಪ್ರಮುಖ ಹೆದ್ದಾರಿಯಾದ ಕಿಸಾನ್ ಪಥ್‌ನಲ್ಲಿ ನಡೆದಿದೆ.
ಈ ಬೆಂಕಿ ಆಕಸ್ಮಿಕ ಸಂಭವಿಸಿದ ವೇಳೆ ಬಸ್‌ನಲ್ಲಿ ಅಂದಾಜು 80 ಮಂದಿ ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮೋಹನ್‌ಲಾಲ್‌ಗಂಜ್ ಸಹಾಯಕ ಪೊಲೀಸ್ ಆಯುಕ್ತ ರಜನೀಶ್ ವರ್ಮ, "ಬಿಹಾರದ ಬೇಗುಸರಾಯಿಯಿಂದ ದಿಲ್ಲಿಗೆ ತೆರಳುತ್ತಿದ್ದ ಬಸ್‌ನಲ್ಲಿ ದಿಢೀರನೆ ಬೆಂಕಿ ಕಾಣಿಸಿಕೊಂಡಿದೆ" ಎಂದು ತಿಳಿಸಿದ್ದಾರೆ.
"ಪ್ರಾಥಮಿಕ ತನಿಖೆಯ ಪ್ರಕಾರ, ಬಸ್‌ನ ಗೇರ್ ಬಾಕ್ಸ್‌ನಲ್ಲಿ ಸಂಭವಿಸಿರುವ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ" ಎಂದು ಅವರು ಹೇಳಿದ್ದಾರೆ.
"ಬೆಂಕಿ ಕಾಣಿಸಿಕೊಂಡ ವೇಳೆ ಬಹುತೇಕ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರು. ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ, ತ್ವರಿತವಾಗಿ ಬಸ್ ಅನ್ನು ವ್ಯಾಪಿಸಿದ್ದರಿಂದ, ನಿದ್ರೆಯಿಂದ ಮೇಲೇಳಲಾಗದ ಇಬ್ಬರು ಮಹಿಳೆಯರು, ಇಬ್ಬರು ಮಕ್ಕಳು ಹಾಗೂ ಓರ್ವ ಪುರುಷ ಪ್ರಯಾಣಿಕ ಬಸ್‌ನಲ್ಲೇ ಸಜೀವ ದಹನಗೊಂಡಿದ್ದಾರೆ. ಈ ವೇಳೆ ಇನ್ನೂ ಹಲವಾರು ಪ್ರಯಾಣಿಕರಿಗೂ ಗಾಯಗಳಾಗಿದ್ದು, ಅವರನ್ನೆಲ್ಲ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.