ದಿಲ್ಲಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ : ಜನಜೀವನ ಅಸ್ತವ್ಯಸ್ಥ, ವಿಮಾನ ಹಾರಾಟದಲ್ಲಿ ವ್ಯತ್ಯಯ
ಹೊಸದಿಲ್ಲಿ : ರವಿವಾರ ಮುಂಜಾನೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆಯಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡು ಜನ ಜೀವನ ಅಸ್ತವ್ಯಸ್ಥವಾಗಿದೆ.
ಗಾಳಿ, ಮಳೆಗೆ ಹಲವೆಡೆ ವಿದ್ಯುತ್ ಕಂಬಗಳು, ಮರಗಳು ಧರೆಗೆ ಉರುಳಿವೆ. ಹಲವಾರು ರಸ್ತೆಗಳು ಮತ್ತು ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿ ಕೊಂಡಿದೆ. ರಾತ್ರಿ 11.30 ರಿಂದ ಬೆಳಿಗ್ಗೆ 5.30ರ ನಡುವೆ 82 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ ಮತ್ತು 81.2 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿರುಗಾಳಿ ಮತ್ತು ಭಾರೀ ಮಳೆಯಿಂದಾಗಿ 100ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಶನಿವಾರ ರಾತ್ರಿ 11:30 ರಿಂದ ರವಿವಾರ ಬೆಳಗಿನ ಜಾವ 4ರವರೆಗೆ ಸುಮಾರು 49 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.
ನೈರುತ್ಯ ಮುಂಗಾರು ಶನಿವಾರ ಕೇರಳ ಪ್ರವೇಶಿಸಿದೆ. ವಾಡಿಕೆಯಂತೆ ಜೂನ್ 1ರ ವೇಳೆಗೆ ಆಗಮಿಸುವ ಮುಂಗಾರು ಮಾರುತ ಈ ಬಾರಿ ಒಂದು ವಾರ ಮುಂಚಿತವಾಗಿಯೇ ಕಾಲಿಟ್ಟಿದೆ.