ಅಕ್ರಮ ಭಾರತೀಯ ವಲಸಿಗರಿರುವ ಅಮೆರಿಕದ 2ನೇ ಮಿಲಿಟರಿ ವಿಮಾನ ಶನಿವಾರ ಅಮೃತಸರಕ್ಕೆ ಬಂದಿಳಿಯುವ ಸಾಧ್ಯತೆ : ವರದಿ
ಸಾಂದರ್ಭಿಕ ಚಿತ್ರ | indiatoday
ಹೊಸದಿಲ್ಲಿ : ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕದ 2ನೇ ಮಿಲಿಟರಿ ವಿಮಾನ ಶನಿವಾರ(ಫೆಬ್ರವರಿ.15) ಭಾರತದ ಅಮೃತಸರಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ India Today ವರದಿ ಮಾಡಿದೆ.
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ದೇಶದ ಕಾನೂನು ಜಾರಿ ಸಂಸ್ಥೆಗಳು ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಂಡಿವೆ. "ಡಾಂಕಿ ರೂಟ್" ಅಥವಾ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಅಕ್ರಮ ಮಾರ್ಗಗಳ ಮೂಲಕ ಅಮೆರಿಕಕ್ಕೆ ಪ್ರವೇಶಿಸಿದ ಪಂಜಾಬ್‌ನ ಅನೇಕ ಜನರು ಈಗ ಗಡೀಪಾರು ಭೀತಿ ಎದುರಿಸುತ್ತಿದ್ದಾರೆ.
ಫೆಬ್ರವರಿ 5ರಂದು ಅಮೆರಿಕ ಗಡೀಪಾರು ಮಾಡಿದ 104 ಅಕ್ರಮ ವಲಸಿಗರನ್ನು ಹೊತ್ತೊಯ್ಯುವ US ಮಿಲಿಟರಿ ವಿಮಾನ ಅಮೃತಸರಕ್ಕೆ ಬಂದಿಳಿದಿತ್ತು. ಫೆಬ್ರವರಿ.15ರಂದು ಅಕ್ರಮ ವಲಸಿಗರನ್ನು ಹೊತ್ತೊಯ್ಯುವ ಇನ್ನೊಂದು US ಮಿಲಿಟರಿ ವಿಮಾನ ಅಮೃತಸರಕ್ಕೆ ಬಂದಿಳಿಯುವ ನಿರೀಕ್ಷೆಯಿದೆ.
ಅಕ್ರಮ ವಲಸಿಗರನ್ನು ಹೊತ್ತೊಯ್ಯುವ ವಿಮಾನ ಅಮೃತಸರದಲ್ಲಿ ಲ್ಯಾಂಡಿಂಗ್ ಗೆ ಅವಕಾಶ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ʼಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಪಂಜಾಬ್ ರಾಜ್ಯವನ್ನು ಗುರಿಯಾಗಿಸಿಕೊಂಡಿದೆ. ಹರ್ಯಾಣ ಅಥವಾ ಪಂಜಾಬ್‌ನಲ್ಲಿ ಯಾಕೆ ವಿಮಾನವನ್ನು ಇಳಿಸುವುದಿಲ್ಲ. ಇದು ಪಂಜಾಬ್ ನ ಪ್ರತಿಷ್ಠೆಯನ್ನು ಹಾಳುಮಾಡುವ ಬಿಜೆಪಿಯ ಪ್ರಯತ್ನವಾಗಿದೆ. ವಿಮಾನವು ಅಹಮದಾಬಾದ್‌ನಲ್ಲಿ ಲ್ಯಾಂಡ್ ಮಾಡಬೇಕುʼ ಎಂದು ಪಂಜಾಬ್ ನ ಹಣಕಾಸು ಸಚಿವ ಹರ್ಪಾಲ್ ಚೀಮಾ ಆರೋಪಿಸಿದ್ದಾರೆ.
ಈ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಹಲವಾರು ವರ್ಷಗಳಿಂದ USನಿಂದ ಭಾರತೀಯ ವಲಸಿಗರನ್ನು ಗಡೀಪಾರು ಮಾಡಲಾಗುತ್ತಿದೆ. 2009 ರಿಂದ 15,668 ಅಕ್ರಮ ಭಾರತೀಯ ವಲಸಿಗರನ್ನು ಗಡೀಪಾರು ಮಾಡಲಾಗಿದೆ. ಈ ಪ್ರಕ್ರಿಯೆಯು ಹೊಸತೇನಲ್ಲವಾದರೂ, ತನ್ನ ನಾಗರಿಕರನ್ನು ನ್ಯಾಯಯುತವಾಗಿ ನಡೆಸಿಕೊಳ್ಳುವಂತೆ ನೋಡಿಕೊಳ್ಳಲು ಸರಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.