‘ಫ್ಲೈಯಿಂಗ್ ಸಾಸರ್' ಅಲ್ಲ ‘ಫ್ಲೈಯಿಂಗ್ ಬುಲ್‌ಡಾಗ್’!
ದಟ್ಟಾರಣ್ಯದಲ್ಲಿ ನೆಲೆಸಿರುವ ಈ ಹಾರುವ ಬುಲ್‌ಡಾಗ್ ಗೊತ್ತೆ?
160 ವರ್ಷಗಳ ಹಿಂದೆ ಬ್ರಿಟಿಷ್ ನ್ಯಾಚುರಲಿಸ್ಟ್ ಆಲ್‌ಫ್ರೆಡ್ ರಸೆಲ್ ವ್ಯಾಲೆಸ್ ಈ ಜೇನುನೊಣವನ್ನು ಪತ್ತೆ ಮಾಡಿದ್ದರು. ದಶಕಗಳಿಂದ ವಿಜ್ಞಾನಿಗಳು ಅದನ್ನು ಹುಡುಕುತ್ತಿದ್ದರೂ ಪತ್ತೆಯಾಗಿರಲಿಲ್ಲ.
‘ಫ್ಲೈಯಿಂಗ್ ಬುಲ್‌ಡಾಗ್’ ಎಂದೇ ಜನಪ್ರಿಯವಾಗಿರುವ ವ್ಯಾಲೆಸ್ ಕಂಡುಹಿಡಿದ ದೈತ್ಯ ಜೇನುನೊಣ ಜಗತ್ತಿನಲ್ಲೇ ಅತಿ ದೊಡ್ಡ ಜೇನುನೊಣ. ಕೀಟಗಳ ಸಾಮ್ರಾಜ್ಯದಲ್ಲಿ ಸಿಗುವ ಅತಿ ಅದ್ಭುತ ಜೀವಿಗಳಲ್ಲಿ ಒಂದಾಗಿದೆ ಈ ದೈತ್ಯ ಜೇನುನೊಣ.
160 ವರ್ಷಗಳ ಹಿಂದೆ ಬ್ರಿಟಿಷ್ ನ್ಯಾಚುರಲಿಸ್ಟ್ ಆಲ್‌ಫ್ರೆಡ್ ರಸೆಲ್ ವ್ಯಾಲೆಸ್ ಈ ಜೇನುನೊಣವನ್ನು ಪತ್ತೆ ಮಾಡಿದ್ದರು. ದಶಕಗಳಿಂದ ವಿಜ್ಞಾನಿಗಳು ಅದನ್ನು ಹುಡುಕುತ್ತಿದ್ದರೂ ಪತ್ತೆಯಾಗಿರಲಿಲ್ಲ. 2019ರಲ್ಲಿ ಇಂಡೊನೇಷ್ಯಾದ ನಾರ್ತ್ ಮೊಲ್ಯುಕಸ್ ದ್ವೀಪದಲ್ಲಿ ಕಳೆದುಹೋದ ಪ್ರಭೇದಗಳನ್ನು ಹುಡುಕುತ್ತಿದ್ದ ತಂಡವೊಂದರ ಕಣ್ಣಿಗೆ ಇದು ಬಿದ್ದಿತ್ತು. ಜಾಗತಿಕ ವನ್ಯಜೀವಿ ಸಂರಕ್ಷಣೆ ಯೋಜನೆಯಡಿ ಕಳೆದುಹೋದ ಪ್ರಭೇದಗಳ ಹುಡುಕಾಟಕ್ಕಾಗಿ ಈ ತಂಡ ಹೊರಟಿತ್ತು. ಆ ಸಂದರ್ಭದಲ್ಲಿ ಈ ದೈತ್ಯ ಜೇನುನೊಣ ಪತ್ತೆಯಾಗಿರುವುದು ಜಾಗತಿಕವಾಗಿ ಜೀವ ವಿಜ್ಞಾನಿಗಳಲ್ಲಿ ಉತ್ಸಾಹ ಮೂಡಿಸಿತ್ತು.
ಹಾರುವ ಬುಲ್‌ಡಾಗ್ ಎಂದು ಕರೆಯುವುದೇಕೆ?
ಅದರ ವಿಶಾಲವಾದ ಗಾತ್ರದಿಂದ ಈ ಹೆಸರು ಬಂದಿದೆ. ಈ ಪ್ರಭೇದದ ಹೆಣ್ಣು ಜೇನುನೊಣಗಳು 1.5 ಇಂಚುಗಳಷ್ಟು (3.8 ಸೆಂ.ಮೀ.) ಉದ್ದವಿರುತ್ತವೆ. ಅಂದರೆ ಸಾಮಾನ್ಯ ಜೇನುನೊಣಗಳಿಗೆ ನಾಲ್ಕುಪಟ್ಟು ದೊಡ್ಡದು! ಇವುಗಳ ರೆಕ್ಕೆಗಳು 2.5 ಇಂಚುಗಳಷ್ಟು (6.3 ಸೆಂ.ಮೀ.) ಉದ್ದವಿರುತ್ತವೆ. ದೊಡ್ಡ ಗಾತ್ರದ ದವಡೆಯ ಮೂಳೆ, ಕಪ್ಪು ಬಣ್ಣದ ಕವಚವಿರುವ ದೇಹ ಹೊಂದಿರುವ ಈ ಜೇನುನೊಣ ಹಾರುವ ಟ್ಯಾಂಕ್‌ನಂತೆ ಕಾಣಿಸುತ್ತದೆ; ನಮ್ಮ ಉದ್ಯಾನವನಗಳಲ್ಲಿ ಹಾರಾಡುವ ಜೇನುನೊಣಗಳಂತಿಲ್ಲ.
“ಹಾರುವ ಬುಲ್‌ಡಾಗ್ ನೋಡುವುದು ನಿಜಕ್ಕೂ ಅತ್ಯದ್ಭುತ ಅನುಭವವಾಗಿತ್ತು. ಆ ಕೀಟ ಬದುಕಿದ್ದುದೇ ನಮಗೆ ಗೊತ್ತಿರಲಿಲ್ಲ,” ಎಂದು 2019ರ ವಿಜ್ಞಾನಿಗಳ ತಂಡದ ಜೊತೆಗಿದ್ದ ಕ್ಲೇ ಬೋಲ್ಟ್ ಹೇಳುತ್ತಾರೆ. ಅವರು ಆ ಬುಲ್‌ಡಾಗ್ ನ ಫೋಟೋ ತೆಗೆದ ಮೊದಲ ವ್ಯಕ್ತಿ. “ಪ್ರಭೇದ ಎಷ್ಟು ಸುಂದರವಾಗಿದೆ ಮತ್ತು ದೊಡ್ಡದಾಗಿದೆ ಎಂದು ಕಣ್ಣಲ್ಲಿ ನೋಡುವುದು ಅದ್ಭುತ ಅವಕಾಶ. ನನ್ನನ್ನು ಹಾದುಹೋದಾಗ ಕೇಳಿಬಂದ ಅದರ ರೆಕ್ಕೆಯ ಶಬ್ದವೂ ಅತ್ಯದ್ಭುತವಾಗಿತ್ತು,” ಎಂದು ಅವರು ಹೇಳಿದ್ದರು.
ಬುಲ್‌ಡಾಗ್ ವಾಸವೆಲ್ಲಿ?
ವ್ಯಾಲೆಸ್‌ನ ದೈತ್ಯ ಜೇನುನೊಣ ಇಂಡೊನೇಷ್ಯದ ಕೆಳನಾಡಿನ ಅರಣ್ಯ ಪ್ರದೇಶದಲ್ಲಿ ಕಂಡುಬರುತ್ತದೆ. ಮುಖ್ಯವಾಗಿ ಉತ್ತರ ಮೊಲ್ಯುಕಸ್‌ನಲ್ಲಿ ಇದರ ವಾಸ. ಇದು ಏಕಾಂಗಿಯಾಗಿ ನೆಲೆಸುವ ಜೇನುನೊಣ. ಸಾಮಾನ್ಯ ಜೇನುನೊಣಗಳು ಅಥವಾ ಕಣಜಗಳಂತೆ ಗುಂಪಿನಲ್ಲಿ ಬದುಕುವುದಿಲ್ಲ.
ಅದರ ಆವಾಸಸ್ಥಾನ?
ಸಾಮಾನ್ಯ ಜೇನುನೊಣಗಳಂತೆ ಗೂಡು ಕಟ್ಟುವುದಿಲ್ಲ. ಈ ಜೇನುನೊಣಗಳು ಸಕ್ರಿಯವಾಗಿರುವ ಗೆದ್ದಲು ದಿಬ್ಬಗಳಲ್ಲಿ ಗೂಡು ಕಟ್ಟಿಕೊಂಡು ನೆಲೆಸುತ್ತವೆ. ತಮ್ಮ ದೊಡ್ಡ ದವಡೆಗಳಿಂದ ಮರದ ಅಂಟನ್ನು ತೆಗೆಯುತ್ತವೆ ಮತ್ತು ಕೋಣೆಗಳನ್ನು ನಿರ್ಮಿಸುತ್ತವೆ. ಜಲ-ನಿರೋಧಕ ಸುರಕ್ಷಿತ ಸ್ಥಳವನ್ನು ತನಗೆ ಮತ್ತು ತನ್ನ ಮರಿಗಳಿಗೆ ಸಜ್ಜುಗೊಳಿಸುತ್ತವೆ. ಇಂತಹ ಗೂಡಿನಿಂದ ಬೇಟೆಗಾರರಿಂದ ತಪ್ಪಿಸಿಕೊಳ್ಳಲು ಮತ್ತು ಕಠಿಣ ಪರಿಸರದಲ್ಲಿ ಬದುಕಲು ಸಾಧ್ಯವಾಗುತ್ತದೆ.
ಬುಲ್‌ಡಾಗ್ ಕಾಣದೆ ಇರಲು ಕಾರಣ?
ಇದು ಮಳೆಕಾಡಿನ ದಟ್ಟಾರಣ್ಯದಲ್ಲಿ ನೆಲೆಸಿರುವ ಕಾರಣ ಕಣ್ಣಿಗೆ ಕಾಣಿಸುವುದಿಲ್ಲ. ಗೆದ್ದಲು ದಿಬ್ಬಗಳೊಳಗೆ ಗೂಡು ಕಟ್ಟುತ್ತದೆ. ನೆಲದಿಂದ ಹಲವು ಮೀಟರ್ ಎತ್ತರದಲ್ಲಿ ಸಾಮಾನ್ಯವಾಗಿ ಈ ಗೂಡು ಇರುತ್ತದೆ. ಆವಾಸಸ್ಥಾನದ ನಷ್ಟ ಮತ್ತು ಬೇಟೆಯಿಂದಾಗಿ ಈ ಜೇನುನೊಣಗಳ ಸಂಖ್ಯೆಯೂ ಅತ್ಯಂತ ಕಡಿಮೆ.
2019ರಲ್ಲಿ ಕಂಡುಬರುವುದಕ್ಕಿಂತ ಮೊದಲು 1981ರಲ್ಲಿ ಒಮ್ಮೆ ಕಂಡುಬಂದಿರುವುದು ದೃಢಪಟ್ಟಿದೆ. 1981ರ ನಂತರ ಅದರ ಪ್ರಭೇದ ನಾಶವಾಗಿದೆ ಎಂದು ತಿಳಿಯಲಾಗಿತ್ತು. ಆದರೆ 2019ರಲ್ಲಿ ಕಂಡುಬಂದ ಬಳಿಕ ಅದು ಜೀವಂತವಿದೆ ಎಂಬುದು ಖಾತ್ರಿಯಾಗಿದೆ. ಇಂದಿಗೂ ಈ ಜೇನುನೊಣ ಅಪರೂಪದ, ವಿನಾಶದ ಅಂಚಿನಲ್ಲಿರುವ ಕೀಟವೆಂದು ಪಟ್ಟಿಮಾಡಲಾಗಿದೆ.